‘ಕೆಜಿಎಫ್’ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿವೆ. ಇವುಗಳಲ್ಲಿ ಕೆಲಸ ಮಾಡಿದವರು ಕೂಡ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ದೇಶದಾದ್ಯಂತ ಬೇಡಿಕೆಯಲ್ಲಿದ್ದಾರೆ. ನಾಯಕ ಯಶ್ ಅವರ ಮುಂದಿನ ಚಿತ್ರಕ್ಕೆ ಪ್ರಪಂಚದಾದ್ಯಂತದ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ರೀತಿ ಸಿನಿಮಾದ ಸಹಕಲಾವಿದರೊಬ್ಬರು ಹೊಸ ಚಿತ್ರದ ನಾಯಕರಾಗಲಿದ್ದಾರೆ. ಅದ್ಯಾರೆಂದು ತಿಳಿದರೆ ಅಚ್ಚರಿಯಾಗುವುದಂತೂ ಖಂಡಿತ. ಈ ಕಲಾವಿದರು ಬೇರಾರು ಅಲ್ಲದೇ, ಕೆಜಿಎಫ್ ನಲ್ಲಿನ ಅಂಧನ ಪಾತ್ರವಹಿಸಿದ್ದ ಕೃಷ್ಣ ಜಿ ರಾವ್.
ಕೇವಲ ಕೆಲವು ಕ್ಷಣಗಳಿಗಷ್ಟೇ ಸೀಮಿತವಾಗಿದ್ದ ಕುರುಡನ ಪಾತ್ರ ಇವರದ್ದಾಗಿದ್ದರೂ, ಕೆಜಿಎಫ್ ಚಿತ್ರದಲ್ಲಿ ಇವರು ಮಾಡಿದ್ದ ಮೋಡಿ ಅಪಾರ. ಇದ್ದ ಚಿಕ್ಕ ಪಾತ್ರದಲ್ಲೆ ಉತ್ತಮವಾಗಿ ನಟಿಸಿ ಪ್ರೇಕ್ಷಕರ ಮನಸಿನಲ್ಲಿ ಕುರುಡುನಾಗೇ ಉಳಿದವರಿವರು. ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾದ ಬಳಿಕ ಇದೀಗ ನಾಯಕನಟನಾಗಿ ತೆರೆಮೇಲೆ ಬರಲು ಸಿದ್ದರಾಗಿದ್ದಾರೆ ಕೃಷ್ಣರಾವ್. ‘ಮುದುಕನ ಲವ್ ಸ್ಟೋರಿ’ ಎಂಬ ಹೊಸ ಚಿತ್ರದಲ್ಲಿ ಕೃಷ್ಣರಾವ್ ನಾಯಕನಟರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲೂ ಸಫಲತೆ ಕಂಡುಕೊಂಡು ಇದೀಗ ಸೆನ್ಸರ್ ಪ್ರಕ್ರಿಯೆಯತ್ತ ಚಿತ್ರತಂಡ ಸಾಗುತ್ತಿದೆ.
ಕನ್ನಡ ಕಂಡ ಶ್ರೇಷ್ಠ ನಟ-ನಿರ್ದೇಶಕ ಶಂಕರ್ ನಾಗ್ ಅವರ ಜೊತೆ ಕೆಲಸ ಮಾಡಿದ ಹೆಮ್ಮೆ ಇರುವವರು ಕೃಷ್ಣರಾವ್. ಈ ಬಗ್ಗೆ ಮಾತನಾಡುವ ಅವರು, “ದಶಕಗಳಿಂದ ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಏನನ್ನು ಗಳಿಸಲಾಗಿರಲಿಲ್ಲ. ಆದರೀಗ ಕೆಜಿಎಫ್ ಎಂಬ ಒಂದು ಚಿತ್ರದಿಂದ ಜೀವನ ಬದಲಾಗಿದೆ. ಕೆಜಿಎಫ್ ಚಾಪ್ಟರ್ 1ರ ನಂತರ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗು, ಚಾಪ್ಟರ್ 2ರ ನಂತರ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕೆಜಿಎಫ್ ಚಿತ್ರ ನನಗೆ ತುಂಬಾ ನೀಡಿದೆ” ಎಂದಿದ್ದಾರೆ. ಶಂಕರನಾಗ್ ಅವರನ್ನು ನೆನೆಯುತ್ತ “ಅವರ ಕಲೆ ಹಾಗು ಕೆಲಸಗಳಿಗೆ ನಾನು ಸದಾ ಅಭಿಮಾನಿ. ಅವರನ್ನು ಹತ್ತಿರದಿಂದ ನೋಡುತ್ತಾ ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಸಂತೋಷ ನನಗಿದೆ” ಎಂದು ಭಾವುಕಾರಾಗಿದ್ದಾರೆ.
‘ಮುದುಕನ ಲವ್ ಸ್ಟೋರಿ’ ಸಿನಿಮಾ ಒಬ್ಬ ಮುದುಕನ ಜೀವನದ ಸುತ್ತ ತಿರುಗೋ ಕಥೆಯಂತೆ. ಮುದುಕನೊಬ್ಬನಿಗೆ ಮದುವೆ ಮಾಡಿಸಲು ಉಂಟಾಗೋ ಅಡೆತಡೆಗಳ ಬಗ್ಗೆ ಹಾಸ್ಯಮಯ ಸಿನಿಮಾ ಮಾಡಲಾಗಿದೆಯಂತೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಿ ಕಾದು ನೋಡಬೇಕಿದೆ.