ಕೆಜಿಎಫ್, ಹೆಸರು ಕೇಳಿದರೆ ಚಿನ್ನದ ನೆನಪು ಬರುತ್ತಿದ್ದ ಜನರಿಗೆ ಈಗ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಮುಂತಾದವರ ನೆನಪಾಗುತ್ತದೆ. ಅದು ಆ ಸಿನಿಮಾ ಹುಟ್ಟುಹಾಕಿದ ಭರವಸೆಗೆ ಸಾಕ್ಷಿ. ಈಗ ಈ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2 ಬಗೆಗಿನ ವಿವಿಧ ಹೊಸ ರೋಮಾಂಚನಕಾರಿ ವಿಷಯಗಳು ಹೊರಬೀಳುತ್ತಿವೆ.
ನಮಗೆಲ್ಲ ಗೊತ್ತಿರೋ ಹಾಗೆಯೇ ಕೆಜಿಎಫ್ ಒಂದು ಪಾನ್-ಇಂಡಿಯನ್ ಚಿತ್ರ, ಮಾತ್ರವಲ್ಲದೆ ಪ್ರಪಂಚದ ಪ್ರಾಕೃತಿಕ ಮೂಲೆಗಳಿಂದ, ಭಾಷಾ-ಭೇಧ ಇಲ್ಲದೆ ಎಣಿಸಲಾಗದಷ್ಟು ಸಿನಿಪ್ರೇಮಿಗಳು ಕಾತುರದಿಂದ ಕಾಯುತ್ತಿರೋ ಸಿನಿಮಾ. ಇನ್ನೇನು ಸುಮಾರು ಒಂದು ತಿಂಗಳು, ಅಂದರೆ ಏಪ್ರಿಲ್ 14ರಂದು ಪ್ರಪಂಚಾದಾದ್ಯಂತ ಬೆಳ್ಳಿತೆರೆಯನ್ನ ಬೆಳಗಲಿದೆ. ಈಗಾಗಲೇ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನ ಹೊರಹಾಕಿದೆ. ಮಾರ್ಚ್ 27ರ ಸಾಯಂಕಾಲ 6:40ರ ಸುಮಾರಿಗೆ ಟ್ರೈಲರ್ ಯೂಟ್ಯೂಬ್ ನಲ್ಲಿ ಬೆಂಕಿ ಹತ್ತಿಸಲಿದೆ. ಸದ್ಯ ಚಿತ್ರದ ಹಂಚಿಕೆ ಹಕ್ಕುಗಳಿಗಾಗಿ ಭರದಿಂದ ಬೇಡಿಕೆಗಳೇರುತ್ತಿವೆ.
ನಮ್ಮ ಕರುನಾಡಿನಲ್ಲಿ ಕನ್ನಡದ ಕೆಜಿಎಫ್ ಹಂಚಿಕೆ ಹೊಂಬಾಳೆ ಸಂಸ್ಥೆಯದ್ದು. ತೆಲುಗಿನಲ್ಲಿ ‘ಶ್ರೀ ವೆಂಕಟೇಶ್ ಕ್ರಿಯೇಷನ್ಸ್’, ತಮಿಳಿನಲ್ಲಿ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಜವಾಬ್ದಾರಿಯಾದರೆ, ಮಲಯಾಳಂನಲ್ಲಿ ‘ಪೃಥ್ವಿರಾಜ್ ಪ್ರೊಡಕ್ಷನ್ಸ್’ ಜನರಿಗೆ ತಲುಪಿಸಲಿದೆ. ಇನ್ನು ಭಾರತದ ಶ್ರೀಮಂತ ಸಿನಿಪ್ರಪಂಚ ಬಾಲಿವುಡ್ ನಲ್ಲಿ ‘ಎಕ್ಸಲ್ ಎಂಟರ್ಟೈನ್ಮೆಂಟ್’ ಹಾಗು ‘AA ಫಿಲಂಸ್’ ಕೆಜಿಎಫ್ ನ ಚಿನ್ನವನ್ನು ಜನರಿಗೆ ಹಂಚಲಿದೆ. ಪರದೇಶಗಳಲ್ಲಿನ ಹಿಂದಿ ಹಂಚಿಕೆಯನ್ನ ಅನಿಲ್ ತಧಾನಿ ತಮ್ಮದಾಗಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ.
ಇನ್ನು ಕೆಜಿಎಫ್ ಹೊರದೇಶಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಈ ಎಲ್ಲ ಹಕ್ಕುಗಳಿಗೆ ಮೂಲಸಂಸ್ಥೆಯಾದ ಹೊಂಬಾಳೆಯವರು ಬೃಹತ್ ಮೊತ್ತವನ್ನ ಕೇಳುತ್ತಿದ್ದಾರೆಬುದು ಬಜಾರಿನ ಮಾತು. ಹಂಚಿಕೆದಾರರು ಯಾರೆಂದು ಇನ್ನು ತಿಳಿಯದಾದರೂ ಸಹ ಕೆಜಿಎಫ್ ಚಾಪ್ಟರ್ 2ರ ಬೇಡಿಕೆ ಮಾತ್ರ ಮುಗಿಲಿನೆತ್ತರದಲ್ಲಿದೆ.