ಕನ್ನಡದ ಸಿನಿರಸಿಕರಿಗೆ ಒಂದಷ್ಟು ನಿರ್ದೇಶಕರು ಅಥವಾ ನಟರು ತಮ್ಮ ಮುಂದಿನ ಸಿನಿಮಾ ಘೋಷಿಸುತ್ತಿದ್ದಾರೆ ಎಂದರೆ ಎಲ್ಲಿಲ್ಲದ ಸಂತಸ ಹುಟ್ಟುತ್ತದೆ. ಈ ಸಾಲಿನ ನಟ-ನಿರ್ದೇಶಕರಲ್ಲಿ ಮೊದಲಿಗರು ರಿಯಲ್ ಸ್ಟಾರ್ ಉಪೇಂದ್ರ ಅವರು. ಉಪ್ಪಿ ಅವರ ನಿರ್ದೇಶನಕ್ಕೆ ಪ್ರತ್ಯೇಕವಾದ ಅಭಿಮಾನಿ ಬಳಗವಿದೆ. ‘ಓಂ’, ‘ಉಪ್ಪಿ’, ‘ಉಪ್ಪಿ 2’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡಿರುವ ಉಪೇಂದ್ರ ಅವರು ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದುವೇ ‘ಉಪ್ಪಿ 3’ ಎಂದೇ ಕರೆಸುಕೊಳ್ಳುತ್ತಿರುವ ‘ಯು ಐ’. ಸದ್ಯ ಈ ಸಿನಿಮಾದ ನಾಯಕಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.
ಬರೋಬ್ಬರಿ ಏಳು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶನ ಮಾಡುತ್ತಿರೋ ಚಿತ್ರ ‘ಯು ಐ’. ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗೆ ಇದೆ. ಸದ್ಯ ಕೆಜಿಎಫ್ ಚಿತ್ರಗಳ ನಾಯಕಿ, ರಾಕಿ ಭಾಯ್ ನ ಮನದರಸಿ, ರೀನಾ ಆಗೇ ಎಲ್ಲೆಡೆ ಪರಿಚಿತವಾಗಿರೋ ಶ್ರೀನಿಧಿ ಶೆಟ್ಟಿ ಅವರನ್ನು ಸಿನಿಮಾದ ನಾಯಕಿಯಾಗಿ ಚಿತ್ರತಂಡ ಆರಿಸಿಕೊಂಡಿದೆ. ಶ್ರೀನಿಧಿ ಶೆಟ್ಟಿ ಅವರನ್ನು ಕಥೆಯ ಒಬ್ಬ ನಾಯಕಿಯಾಗಿ ತಮ್ಮ ತಂಡಕ್ಕೆ ‘ಯು ಐ’ ಆಹ್ವಾನಿಸಿಕೊಂಡಿದ್ದು, ಇನ್ನು ಯಾರ್ಯಾರು ಸೇರಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಜೂನ್ 28ರಂದು ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಳಿಗಾಗಿ ಕಾದು ನೋಡಬೇಕಿದೆ.