ಮೊದಲನೇ ಅಧ್ಯಾಯ ಹುಟ್ಟಿಸಿದ ನಿರೀಕ್ಷೆಗಳಿಗೆ, ಎರಡನೇ ಅಧ್ಯಾಯ ಪಟಾಕಿ ಹಚ್ಚಿದೆ. ಚಾಪ್ಟರ್ 1 ನೀಡಿದಂತ ಸಂತಸವನ್ನ ಹತ್ತು ಪಟ್ಟು ಹೆಚ್ಚಿಸಿದೆ ಚಾಪ್ಟರ್ 2. ಬಿಡುಗಡೆಯಾದ ಮೊದಲ ವಾರದೊಳಗೆ 700ಕೋಟಿ ದಾಟಿ ದಾಖಲೆ ಬರೆದಂತ ಚಿತ್ರ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2. ಬಿಡುಗಡೆಯಾಗಿ ಹದಿನೈದನೆ ದಿನದಂದು ಪ್ರಪಂಚದಾದ್ಯಂತ 900 ಕೋಟಿಗೂ ಹೆಚ್ಚು ಗಳಿಕೆ ಕಂಡು ಸಾವಿರ ಕೋಟಿಯ ಕ್ಲಬ್ ಸೇರೋ ಭರದಲ್ಲಿದೆ. ಇಷ್ಟೆಲ್ಲಾ ದಾಖಲೆ ಬರೆದು ಅಭಿಮಾನಿಗಳಲ್ಲಿ ಹರ್ಷೋದ್ಗಾರ ಹುಟ್ಟು ಹಾಕಿದ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಅದುವೇ ಒಟಿಟಿ ಬಿಡುಗಡೆಯ ಬಗ್ಗೆ.
ಕೆಜಿಎಫ್ ಚಾಪ್ಟರ್ 1 ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಒಟಿಟಿ ಮುಖ ಕಂಡಿತ್ತು. ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ಚಿತ್ರ ಪ್ರೈಮ್ ವಿಡಿಯೋನಲ್ಲಿ ಲಭ್ಯವಾಗಿತ್ತು. ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯ ಮೂಲಕ ದೂರದರ್ಶನದ ವೀಕ್ಷಕರನ್ನ ತಲುಪಿತ್ತು ಮೊದಲನೇ ಅಧ್ಯಾಯ. ಇದೀಗ ಎರಡನೇ ಅಧ್ಯಯವು ಸಹ ಅದೇ ಮಾರ್ಗದಲ್ಲಿ ನಡೆಯುವಂತೆ ಕಾಣುತ್ತಿದೆ. ಏಪ್ರಿಲ್ 14ಕ್ಕೆ ತೆರೆಕಂಡಿರುವಂತ ಈ ಸಿನಿಮಾ ಬಿಡುಗಡೆಯಾದ ಒಂದು ತಿಂಗಳೊಳಗೆ, ಒಟಿಟಿ ಸೇರಲಿದೆ.
ಅಧಿಕೃತ ಘೋಷಣೆ ಇನ್ನು ಬಾಕಿಯಿದ್ದರು, ಮೂಲಗಳ ಪ್ರಕಾರ ಚಿತ್ರ ಮೇ ತಿಂಗಳ 13ನೇ ತಾರೀಕು ನಡುರಾತ್ರಿ 12ಗಂಟೆಯಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಸಿಗಲಿದೆ. ಚಿತ್ರದ ದೂರದರ್ಶನದ ಹಕ್ಕುಗಳನ್ನು(Satelite Rights) ಜೀ(zee) ವಾಹಿನಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ಕ್ರಮವಾಗಿ, ಜೀ ಕನ್ನಡ, ಜೀ ತಮಿಳ್, ಜೀ ತೆಲುಗು ಹಾಗು ಜೀ ಕೇರಳಮ್ ವಾಹಿನಿಗಳಲ್ಲಿ ತನ್ನ ಮೊದಲ ದೂರದರ್ಶನದ ಪ್ರದರ್ಶನ ಕಾಣಲಿದೆ ಕೆಜಿಎಫ್ ಚಾಪ್ಟರ್ 2.
ಚಿತ್ರಮಂದಿರಗಳಲ್ಲಿ ಸಾವಿರ ಕೋಟಿಯೇಡೆಗೆ ಸಾಗುತ್ತಿರೋ ಸಿನಿಮಾ, ಡಿಜಿಟಲ್ ಹಕ್ಕುಗಳ ಗಳಿಕೆಯಲ್ಲು ಕಡಿಮೆಯೇನಿಲ್ಲ. ಸದ್ಯ ಕೇಳಿಬರುತ್ತಿರೋ ಸುದ್ದಿಗಳ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲ ಭಾಷೆಯ ಒಟಿಟಿ ಹಕ್ಕುಗಳ ಒಟ್ಟು ಮೊತ್ತ ಬರೋಬ್ಬರಿ 320 ಕೋಟಿ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಮೂಡಿಬಂದಿರೋ ಈ ಚಿತ್ರ ಹುಟ್ಟಿಸಿರೋ ತೂಫಾನ್ ಅನ್ನು ತಡೆಯೋರೆ ಇಲ್ಲವಾಗಿದೆ. ಸಂಜಯ್ ದತ್, ರವೀನ ತಂಡನ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್ ಮುಂತಾದವರ ನಟನೆ ಸಿನಿಮಾದ ಮೌಲ್ಯವನ್ನ ಇನ್ನಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಿರಗಂದೂರ್ ಅವರ ನೇತೃತ್ವದ ‘ಹೊಂಬಾಳೆ’ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರ ‘ರಿಚ್ ಗಿಂತ ಹೆಚ್ಚಾಗೆ’ ಕಾಣಿಸಿಕೊಂಡಿದೆ.