ಚಂದನವನದ ಚಿರಯುವಕ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅವರ 128ನೇ ಸಿನಿಮಾವಾಗಿ ಘೋಷಣೆಯಾಗಿರುವ ‘ಘೋಸ್ಟ್’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವಣ್ಣನ ಜನ್ಮದಿನದಂದು ಹೊರಬಿಟ್ಟಂತಹ ಪೋಸ್ಟರ್ ಒಂದು ಪಕ್ಕ ಮಾಸ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡುತ್ತಿದೆ. ಇನ್ನೂ ಚಿತ್ರೀಕರಣ ಆರಂಭವಾಗದ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ‘ಬೀರಬಲ್’ ಸಿನಿಮಾ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅವರು. ಹಾಗಾಗಿ ಶಿವಣ್ಣ-ಶ್ರೀನಿ ಕಾಂಬಿನೇಶನ್ ಗೆ ಕನ್ನಡ ಸಿನಿರಸಿಕರು ಹಾತೊರೆದು ಕಾಯುತ್ತಿದ್ದಾರೆ. ಈ ನಡುವೆ ‘ಘೋಸ್ಟ್’ ತನ್ನ ತಂಡದ ಪರಿಚಯವನ್ನು ಅಭಿಮಾನಿಗಳಿಗೆ ನೀಡುತ್ತಿದೆ.
ಶ್ರೀನಿ ಅಕಾ ಎಂ ಜಿ ಶ್ರೀನಿವಾಸ್ ರಚಿಸಿ ನಿರ್ದೇಶಿಸುತ್ತಿರುವ ಈ ಸಿನಿಮಾ ಒಂದು ಆಕ್ಷನ್ ಥ್ರಿಲರ್ ಕಥೆಯಾಗಿರಲಿದೆ. ಚಿತ್ರದ ತಾರಾಗಣದ ಬಗೆಗೆ ಹೆಚ್ಚಿನ ಮಾಹಿತಿ ಸಿಗದೇ ಇದ್ದರು, ನಿರ್ದೇಶಕ ಶ್ರೀನಿ ತಮ್ಮ ತಾಂತ್ರಿಕ ತಂಡದ ಬಗೆಗೆ ಹೊಸ ಸುದ್ದಿಗಳನ್ನು ಹೊರಹಾಕಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಅವರು ತಂಡ ಸೇರಿದ್ದಾರೆ. ಕ್ಯಾಮೆರಾದ ಕಣ್ಣಾಗಿ ಮಹೇನ್ ಸಿಂಹ ಅವರು ಛಾಯಾಗ್ರಾಹಣ ಮಾಡಲಿದ್ದಾರೆ. ಸಂಭಾಷಣೆ ಬರೆಯಲು ಪ್ರಸನ್ನ ವಿ ಎಂ ಹಾಗು ಮಾಸ್ತಿ ಅವರನ್ನು ಆದುಕೊಂಡಿದ್ದಾರೆ. ಇನ್ನು ಚಿತ್ರದ ಆರ್ಟ್ ಡೈರೆಕ್ಟರ್ ಆಗಿ ‘ಕೆಜಿಎಫ್’ ಹಾಗು ಸಿನಿಮಾಗಳಲ್ಲಿ ಕೆಲಸ ಮಾಡಿ, ಪ್ರೇಕ್ಷಕರ ಪ್ರಶಂಸೆಗೆ ಒಳಗಾಗಿರುವ ಶಿವಕುಮಾರ್ ಅವರು ‘ಘೋಸ್ಟ್’ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಸದ್ಯದ ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಇವರದೇ ಕೈಚಳಕವಿದೆ.
ಒಟ್ಟಿನಲ್ಲಿ ಶಿವರಾಜಕುಮಾರ್ ಅವರಿಗಾಗಿ ಕಾಯುತ್ತಿರುವ ಹಲವು ಸಿನಿಮಾಗಳಲ್ಲಿ ಈ ಸಿನಿಮಾ ಎಲ್ಲರ ದೃಷ್ಟಿಯನ್ನ ತನ್ನತ್ತ ತರಿಸಿಕೊಂಡಿರುವ ಸಿನಿಮಾ. ಚಿತ್ರದ ತಂತ್ರಜ್ಞ ತಂಡವೇ ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಏರಿಸುತ್ತಿರುವಾಗ ಇನ್ನು ತಾರಾಗಣ ಎಷ್ಟರ ಮಟ್ಟಿಗಿನ ಪ್ರಭಾವ ಮೂಡಿಸಲಿದೆ ಎಂದು ಕಾದುನೋಡಬೇಕಿದೆ.