ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಿನ್ನರಿಯಲ್ಲಿ ನಾಯಕ ನಕುಲ್ ಹಾಗೂ ನಾಯಕಿ ಮಣಿಯಾಗಿ ಅಭಿನಯಿಸಿದ್ದ ಪವನ್ ಕುಮಾರ್ ಹಾಗೂ ಭೂಮಿ ಶೆಟ್ಟಿ ಜೋಡಿ ಇದೀಗ ಮತ್ತೆ ವರ್ಷಗಳ ಬಳಿಕ ಒಂದಾಗುತ್ತಿದೆ. ನಕುಲ್ ಹಾಗೂ ಮಣಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಈ ಜೋಡಿ ಇದೀಗ ಒಂದಾಗುತ್ತಿರುವುದು ಹಿರಿತೆರೆಯಲ್ಲಿ.
ಪ್ರಮೋದ್.ಎಸ್.ಆರ್ ನಿರ್ದೇಶನದ ಸಂಚಿನ ಸುಳಿ ಸಿನಿಮಾದ ಮೂಲಕ ಮತ್ತೆ ಈ ಜೋಡಿ ತೆರೆ ಮೇಲೆ ಒಂದಾಗುತ್ತಿದೆ. ಎಂಟು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಒಂದು ಘಟನೆ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಘಟನೆಯ ಎಳೆಯೊಂದನ್ನು ತೆಗೆದುಕೊಂಡ ನಿರ್ದೇಶಕರು ವಿಭಿನ್ನ ರೀತಿಯ ಕಥೆ ಹೆಣೆದಿದ್ದಾರೆ.
ಪ್ರೀತಿಯಲ್ಲಿ ಬಿದ್ದಿರುವ ಕಾಲೇಜು ಹುಡುಗರ ಗುಂಪೊಂದು ಯಾರು ಇಲ್ಲದ ಪ್ರದೇಶಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಅವರು ಸಂಚಿನ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ. ಹಾಗೇ ಸಿಕ್ಕಿ ಹಾಕಿಕೊಂಡಾಗ ಅವರ ಪರಿಸ್ಥಿತಿ ಏನಾಗುತ್ತದೆ? ಆ ಸುಳಿಯಿಂದ ಅವರು ಯಾವ ರೀತಿಯಾಗಿ ತಪ್ಪಿಸಿಕೊಳ್ಳುತ್ತಾರೆ? ಎಂಬುದೇ ಸಿನಿಮಾದ ಕಥಾ ಹಂದರ.
ಕಳೆದ ಭಾನುವಾರ ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು ನಿರ್ದೇಶಕ ನಂದಕಿಶೋರ್ ಅವರು ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು.
ಧರ್ಮಸ್ಥಳದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎನ್.ನಾಗೇಗೌಡ್ರು ಮತ್ತು ಮೈಸೂರಿನ ಫ್ಯಾಶನ್ ಡಿಸೈನರ್ ಹಂಸರವಿಶಂಕರ್ ಜಂಟಿಯಾಗಿ ಮಾನ್ಯ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದು, ಇನ್ನು ಅನಿಲ್ ಮೂಡಲಗಿ ಅವರು ಸಹ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದಾರೆ.