ಕನ್ನಡ ನಾಡಿಗೆ ಅಸಂಖ್ಯಾತ ಸೇವೆಗಳನ್ನು ಸಲ್ಲಿಸಿದವರು ಅಪ್ಪು. ಲೆಕ್ಕಕ್ಕೆ ಸಿಕ್ಕಿದವೇ ಲೆಕ್ಕಮಾಡಲಾಗದಷ್ಟು, ಇನ್ನು ಅರಿಯದವು ಎಷ್ಟಿವೆಯೋ!! ಕರ್ನಾಟಕ ಸರ್ಕಾರದ ಹಲವಾರು ಯೋಜನೆಗಳಿಗೆ ಅಪ್ಪು ರಾಯಲ್ ರಾಯಭಾರಿಯಾಗಿದ್ದವರು. ಇದರಲ್ಲಿ ‘ಕೆ ಎಂ ಎಫ್’ ಸಂಸ್ಥೆ ಕೂಡ ಒಂದು.
‘ಕರ್ನಾಟಕ ಹಾಲು ಉತ್ಪಾದಕರ ಮಂಡಳಿ’ (ಕೆ ಎಂ ಎಫ್) ಸಂಘಕ್ಕೆ ಅಪ್ಪು ಉಚಿತವಾಗಿ ರಾಯಭಾರಿಯಾಗಿದ್ದರು. ಸಂಘದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಪ್ಪು ತಮ್ಮ ಕೈಲಾದಷ್ಟು ಸಹಕಾರ ಕೂಡ ತೋರಿದ್ದರು. ಇದೇ ಕಾರಣಗಳಿಂದಾಗಿ ಕೆ ಎಂ ಎಫ್ ಸಂಘವು ಅಪ್ಪುಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಮುಂದಾಗಿದೆ. ಸುದ್ದಿಗೋಷ್ಠಿಯೊಂದನ್ನು ನಡೆಸಿ ಈ ನಿರ್ಧಾರವನ್ನ ಬಹಿರಂಗಪಡಿಸಿದ ಸಹಕಾರ ಸಚಿವ ಸೋಮಶೇಖರ್, “ಪುನೀತ್ ರಾಜ್‌ಕುಮಾರ್ ಅವರು ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು. ಅಂತೆಯೇ ಕೆಎಂಎಫ್‌ಗೂ ರಾಯಭಾರಿಯಾಗಿ ಉಚಿತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಪುನೀತ್ ರಾಜಕುಮಾರ್ ಅವರಿಗೆ ‘ಸಹಕಾರ ರತ್ನ’ ನೀಡುವುದಾಗಿ ನಿರ್ಧರಿಸಲಾಗಿದೆ. ಸಹಕಾರ ಮಹಾಮಂಡಳಿಯ ಅಧ್ಯಕ್ಷರಾದ ಜಿ ಟಿ ದೇವೇಗೌಡರು ಹಾಗು ಇತರ ಪ್ರಮುಖರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾನು, ಜಿ ಟಿ ದೇವೇಗೌಡರು ಹಾಗು ಸಂಘದ ಗಣ್ಯರು ಅಪ್ಪು ನಿವಾಸಕ್ಕೆ ತೆರಳಿ ‘ಸಹಕಾರ ರತ್ನ’ ಪ್ರಶಸ್ತಿಯನ್ನ ನೀಡಲಿದ್ದೇವೆ.” ಎಂದಿದ್ದಾರೆ.
ಮೂಲಗಳ ಪ್ರಕಾರ ಮಾರ್ಚ್ 20ರಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಈ ಪುರಸ್ಕಾರವನ್ನ ಅಪ್ಪು ಮಡಿಲು ಸೇರಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಪ್ಪುಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ನೀಡುವುದಾಗಿ ಸರ್ಕಾರದ ನಿರ್ಧಾರವಾಗಿದ್ದು, ಸದ್ಯದಲ್ಲೇ ನೀಡಲಿದ್ದಾರಂತೆ. ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟಾರೇಟ್ ಘೋಷಿಸಿದ್ದು, ಇದೇ ಮಾರ್ಚ್ 22ರಂದು ನೀಡಲಿದ್ದಾರೆ. ಇನ್ನು ಈ ವರ್ಷದ ಬಸವಶ್ರೀ ಪ್ರಶಸ್ತಿ ಕೂಡ ಅಪ್ಪುವನ್ನ ಸೇರಿದೆ. ಬದುಕಿದ್ದಾಗ ಪ್ರಶಸ್ತಿಗಳಿಂದ ಬಲುದೂರವೇ ಇದ್ದ ಅಪ್ಪುವನ್ನ ಈಗ ಪ್ರಶಸ್ತಿ ಪುರಸ್ಕಾರಗಳು ಹುಡುಕಿ-ಹುಡುಕಿ ಬರುತ್ತಿವೆ.