ಬೆಳ್ಳಿತೆರೆ ಮೇಲೆ ತೆರೆಕಂಡ ಸಿನಿಮಾಗಳಿಗೆ ಯಶಸ್ಸು ಎಷ್ಟು ಸಿಗುತ್ತದೋ, ಆದರೆ ಪ್ರೇಕ್ಷಕರನ್ನು ತಲುಪಲು ಎರಡೆರಡು ಅವಕಾಶ ದೊರೆಯುತ್ತದೆ ಎನ್ನಬಹುದು. ಚಿತ್ರಮಂದಿರಗಳಲ್ಲಿ ಒಂದಿಷ್ಟು ಕಾಲ ಓಟ ನಡೆಸಿ ನಂತರ ಇನ್ನೊಮ್ಮೆ ‘ಒಟಿಟಿ’ಯ ಮೂಲಕ ಕಿರುತೆರೆ ಪರದೆ ಮೇಲೆ ಸುದ್ದಿಯಲ್ಲಿರಬಹುದು. ಒಟಿಟಿಗೆ ಹೊಸ ಸಿನಿಮಾಗಳ ಸೇರ್ಪಡೆಗಳು ಆಗುತ್ತಲೇ ಇರುತ್ತವೆ. ಸದ್ಯ ಕನ್ನಡಿಗರ ಮನಸ್ಸಿಗೆ ಮುದ ನೀಡಿದ್ದ ಸಿನಿಮಾ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ತನ್ನ ಒಟಿಟಿ ಪಯಣ ನಡೆಸಿದೆ.
ಇದೇ ಏಪ್ರಿಲ್ 29ರಂದು ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಿದ್ದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ, ನೋಡಿದವರೆಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಒಂದು ಮೃದು ಮನಸಿನ ಮಧುರ ಕಥೆ ಎಂದು ಅದೇಷ್ಟೋ ಪ್ರೇಕ್ಷಕರು ಸಿನಿಮಾವನ್ನ ಕರೆದಿದ್ದರು. ಒಬ್ಬ ಸಾಮಾನ್ಯ ಮಲೆನಾಡಿನ ಯುವಕನ ಜೀವನದಲ್ಲಾಗುವ ಏರುಪೇರುಗಳನ್ನು ಹೊತ್ತು ತರುವ ಸಿನಿಮಾ ವೀಕ್ಷಕರಿಗೆ ಒಂದೊಳ್ಳೆ ವಿಷಯ ಹೇಳಿತ್ತು. ದಿಗಂತ್, ಐಂದ್ರಿತಾ ರೈ ಹಾಗು ರಂಜನಿ ರಾಘವನ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ಪ್ರೈಮ್ ವಿಡಿಯೋದಲ್ಲಿ ಸಿನಿಮಾವನ್ನ ಕಣ್ತುಂಬಿಕೊಳ್ಳಬಹುದಾಗಿದೆ.