“ಜಗವೇ ನೀನು ಗೆಳತಿಯೇ, ನನ್ನ ಜೀವದ ಒಡತಿಯೇ” ಸದ್ಯ ಬಹುಪಾಲು ಕನ್ನಡಿಗರು ದಿನನಿತ್ಯ ಗುನುಗುತ್ತಿರೋ ಸಾಲಿದು.’ಸಂಗೀತ ಮಾಂತ್ರಿಕ’ ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಪ್ರಖ್ಯಾತ ಗಾಯಕ ಸಿಡ್ ಶ್ರೀರಾಮ್ ಅವರ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡು ಕನ್ನಡಿಗರೆಲ್ಲರ ಮನಸೆಳೆದಿತ್ತು. ಕನ್ನಡದ ಯಶಸ್ವಿ ನಿರ್ದೇಶಕರಾದ ಶಶಾಂಕ್ ಅವರ ಸಿನಿಮಾ ‘ಲವ್ 360’ಯ ಹಾಡು ಇದಾಗಿತ್ತು. ಹಾಡಿನಿಂದಲೇ ಪ್ರಸಿದ್ದಿ ಪಡೆದ ಈ ಸಿನಿಮಾ ಇದೀಗ ತನ್ನ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
‘ಕೃಷ್ಣಲೀಲಾ’, ‘ಮುಂಗಾರು ಮಳೆ 2’ ಸೇರಿ ಹಲವು ಮಧುರ ಪ್ರೇಮಕತೆಗಳನ್ನು ಕನ್ನಡಿಗರಿಗೆ ನೀಡಿರುವ ಶಶಾಂಕ್ ಅವರ ಮುಂದಿನ ಪ್ರಯತ್ನ ‘ಲವ್ 360’. ಪ್ರವೀಣ್ ಎಂಬ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ನಾಯಕನಟನಾಗಿ ಪರಿಚಯಿಸುತ್ತಿದದ್ದು, ‘ಲವ್ ಮೊಕ್ಟೇಲ್’ನ “ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಇದರ ನಾಯಕಿಯಾಗಿ ನಟಿಸಿದ್ದಾರೆ. ಇದೇ ಆಗಸ್ಟ್ 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೇ ಟ್ರೈಲರ್ ಹಾಗು ಹಾಡುಗಳು ಜನರ ಮನಸೆಳೆದಿದ್ದು, ಸಿನಿಮಾದ ಬಗೆಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಆಗಸ್ಟ್ ತಿಂಗಳಿನಲ್ಲಿ ಹಲವು ಕನ್ನಡ ಸಿನಿಮಾಗಳು ಬಿಡುಗಡೆಯ ಬಾಗಿಲು ತಟ್ಟುತ್ತಿದ್ದು, ಯಾವುದು ಗೆಲ್ಲಲಿದೆ, ಯಾವುದು ಸೋಲಲಿದೆ ಎಂದು ಕಾದುನೋಡಬೇಕಿದೆ.