ಭಾರತ ಚಿತ್ರರಂಗದ ಪ್ರಖ್ಯಾತ ನಟ, ಭಾಷೆಗಳ ಭೇದಭಾವವಿಲ್ಲದ ಅನೇಕ ಅಭಿಮಾನಿಗಳನ್ನು ಪಡೆದಿರುವ ನಟರಾದ ಆರ್ ಮಾಧವನ್ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಸಿನಿಮಾ ‘ರಾಕೆಟ್ರಿ’. ಭಾರತದ ಬಾಹ್ಯಕಾಶ ಸಂಸ್ಥೆ ‘ಇಸ್ರೋ’ನ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದಂತಹ ನಂಬಿ ನಾರಾಯಣ್ ಅವರ ಜೀವನದಾರಿತ ಈ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಸಿನಿಮಾದ ಒಟಿಟಿ ಬಿಡುಗಡೆಯ ದಿನಾಂಕ ಹೊರಬಿದ್ದಿದ್ದು, ಕಿರುತೆರೆಯ ಮೇಲೆ ಕನ್ನಡದಲ್ಲೂ ಬರುತ್ತಿದೆ ‘ರಾಕೆಟ್ರಿ’.
ಸ್ವತಃ ಆರ್ ಮಾಧವನ್ ಅವರೇ ಬರೆದು, ನಿರ್ದೇಶಿಸಿ, ನಟಿಸಿರುವ ಈ ಸಿನಿಮಾವನ್ನು ನಿರ್ಮಾಣ ಮಾಡಿದವರು ಕೂಡ ಅವರೇ. ಮಾಧವನ್ ಅವರಿಗೆ ನಾಯಕಿಯಾಗಿ ಸಿಮ್ರಾನ್ ಬಣ್ಣ ಹಚ್ಚಿದ್ದಾರೆ. ಜುಲೈ 1ರಂದು ತೆರೆಕಂಡಂತಹ ಈ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೂಲವಾಗಿ ತಮಿಳಿನಲ್ಲಿ ಸಿದ್ದವಾದ ಈ ಸಿನಿಮಾ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲೂ ಬೆಳ್ಳಿಪರದೆಯೇರಿತ್ತು. ಇದೀಗ ಒಟಿಟಿ ಗೆ ಬರಲು ಸಿನಿಮಾ ಸಿದ್ದವಾಗಿದ್ದು, ಇದೇ ಜುಲೈ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಸಿಗಲಿದೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಹಾಗು ಕನ್ನಡ ಭಾಷೆಗಳಲ್ಲೂ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ‘ರಾಕೆಟ್ರಿ’ ಸಿನಿಮಾವನ್ನು ನೋಡಲಾಗದೆ ಇದ್ದವರು, ಜುಲೈ 26ರಿಂದ ‘ಅಮೆಜಾನ್ ಪ್ರೈಮ್ ವಿಡಿಯೋ’ದಲ್ಲಿ ಅವರದೇ ಭಾಷೆಗಳಲ್ಲಿ ನೋಡಬಹುದಾಗಿದೆ.