ಕನ್ನಡದ ಸಿನಿಮಾ ರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ಪತಿ ರಾಮು ನಿಧನದ ನಂತರ ಒಪ್ಪಿಕೊಂಡಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ರವೀಂದ್ರ ವಂಶಿ ನಿರ್ದೇಶನ ಮಾಡಲಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದ ನಂತರ ಮಾಲಾಶ್ರೀ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ.
ಇದೀಗ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದತ್ತ ಮರಳಿರುವ ಮಾಲಾಶ್ರೀ ಈ ಸಿನಿಮಾದಲ್ಲಿ ಸೇನಾ ಸಿಬ್ಬಂದಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆಯ ಪಾತ್ರ ನಿರ್ವಹಿಸಲಿದ್ದಾರೆ. ಅವರ ಕೆರಿಯರ್ ನಲ್ಲಿ ಎರಡನೇ ಬಾರಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು ಸಹಜವಾಗಿ ಮಾಸ್ ಅಂಶಗಳು ಇರಲಿದೆ. ಆಸ್ಪತ್ರೆಯ ಸುತ್ತ ಕತೆಯು ಸುತ್ತಲಿದೆ. ಇನ್ನು ಮಾಲಾಶ್ರೀ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು “ವಿಭಿನ್ನ ರೀತಿಯ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದು ನಾನು ಬಯಸಿದ್ದೆ. ನಿರ್ದೇಶಕ ರವೀಂದ್ರ ಅವರು ಕಥೆ ಹೇಳಿದಾಗ ಸಂತಸವಾಯಿತು. ಒಪ್ಪಿಕೊಂಡೆ. ಚಿತ್ರದಲ್ಲಿ ನಾನು ಡಾಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು ಇದರ ಹೊರತಾಗಿ ಸಿನಿಮಾದಲ್ಲಿ ಒಂದಷ್ಟು ಮಾಸ್ ಅಂಶಗಳು ಕೂಡಾ ಇದೆ. ಒಟ್ಟಾರೆಯಾಗಿ ನಿರ್ದೇಶಕರು ಬಹಳ ಉತ್ತಮವಾಗಿ ನನ್ನ ಪಾತ್ರ ಕಟ್ಟಿ ಕೊಟ್ಟಿದ್ದಾರೆ” ಎನ್ನುತ್ತಾರೆ.
ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಸಾಧು ಕೋಕಿಲ ,ರಂಗಾಯಣ ರಘು ,ಪ್ರಮೋದ್ ಶೆಟ್ಟಿ ಹಾಗೂ ಮಂಜು ಪಾವಗಡ ನಟಿಸುತ್ತಿದ್ದಾರೆ. ರಾಮು ಅವರ ನಿಧನದ ನಂತರ ಮಾಲಾಶ್ರೀ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ರಿಲೀಸ್ ಮಾಡಿದ್ದರು. ಈಗ ನಟನೆ ಹಾಗೂ ಪ್ರೊಡಕ್ಷನ್ ಮೇಲೆ ಗಮನ ಹರಿಸಿದ್ದಾರೆ.