‘ಪಿ ಆರ್ ಕೆ ಪ್ರೊಡಕ್ಷನ್ಸ್’ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಿದ್ದಂತೆ. ಹೊಸ ಪ್ರತಿಭೆಗಳ ಕಲೆಗೆ ಓಗೊಟ್ಟು, ಹೊಸ ರೀತಿಯ ಸಿನಿಮಾಗಳಿಗೆ ನಾಂದಿಯಾಗಬೇಕೆಂಬ ಗುರಿಯಿಂದ ಹುಟ್ಟಿಕೊಂಡ ಸಂಸ್ಥೆ ಈ ‘ಪಿ ಆರ್ ಕೆ ಪ್ರೊಡಕ್ಷನ್ಸ್’. ಅದರಂತೆಯೇ ಹಲವಾರು ಅದ್ಭುತ ಪ್ರತಿಭೆಗಳಿಂದ ಉತ್ತಮ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿದೆ ಈ ಸಂಸ್ಥೆ. ಇದೀಗ ಹೊಸ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋಗು ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಅವರಿಗೂ ಅಭೂತಪೂರ್ವ ಸಂಬಂಧವೊಂದಿದೆ. ಇದುವರೆಗೆ ಇವರಿಂದ ನಿರ್ಮಿತವಾದ ಚಿತ್ರಗಳಲ್ಲಿ ನಾಲ್ಕು ಚಿತ್ರಗಳು ನೇರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಕಂಡಿವೆ. ಇದೀಗ ಐದನೇ ಚಿತ್ರವೊಂದು ಇದೇ ದಾರಿಯಲ್ಲಿ ಸಾಗಲು ಸಿದ್ಧವಾಗಿದೆ. ‘ರಾಮ ರಾಮ ರೇ’, ಹಾಗು ‘ಒಂದಲ್ಲ ಎರಡಲ್ಲ’ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ಮುಂದಿನ ಚಿತ್ರ ‘ಮ್ಯಾನ್ ಒಫ್ ದಿ ಮ್ಯಾಚ್’ ‘ಪಿ ಆರ್ ಕೆ’ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಿದೆ. ಇದೇ ಮೇ 5ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬಿಡುಗಡೆಯಾಗಲಿದೆ ಚಿತ್ರ.
ಪುನೀತ್ ರಾಜಕುಮಾರ್ ಅವರು ಮೆಚ್ಚಿದಂತ ಯುವ ನಿರ್ದೇಶಕರಲ್ಲಿ ಸತ್ಯಪ್ರಕಾಶ್ ಅವರು ಕೂಡ ಒಬ್ಬರು. ಅವರ ‘ರಾಮ ರಾಮ ರೇ’, ‘ಒಂದಲ್ಲ ಎರಡಲ್ಲ’ ಚಿತ್ರಗಳನ್ನು ನೋಡಿ ಇಷ್ಟಪಟ್ಟ ಅಪ್ಪು, ತಮ್ಮ ಸಂಸ್ಥೆಯಡಿ ಸಿನೆಮಾ ಮಾಡುವಂತೆ ಸತ್ಯಪ್ರಕಾಶ್ ಗೆ ಅವಕಾಶ ನೀಡಿದ್ದರು. ಅದರಂತೆ ಸತ್ಯಪ್ರಕಾಶ್ ಮಾಡಿಕೊಂಡ ಕಥೆಯೇ ‘ಮ್ಯಾನ್ ಒಫ್ ದಿ ಮ್ಯಾಚ್’. ಕಥೆಯನ್ನ ಬಹುವಾಗಿ ಮೆಚ್ಚಿದ ಅಪ್ಪು ತಂಡಕ್ಕೆ ಶುಭಹಾರೈಸಿದ್ದರು. ‘ಮ್ಯಾನ್ ಒಫ್ ದಿ ಮ್ಯಾಚ್’ ಎಂಬ ತನ್ನ ಚೊಚ್ಚಲ ಚಿತ್ರ ನಿರ್ದೇಶಿಸಲು ಹೆಣಗಾಡುತ್ತಿರೋ ಯುವ ನಿರ್ದೇಶಕನೊಬ್ಬನ ಕಥೆ ಇದಾಗಿರಲಿದ್ದು, ಮೊದಲ ಬಾರಿ ಸತ್ಯ ಪ್ರಕಾಶ್ ಕಾಮಿಡಿಯನ್ನ ಪ್ರಯತ್ನಿಸಿದ್ದಾರೆ. ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರ್, ವೀಣಾ ಸುಂದರ್ ಹಾಗು ವಾಸುಕಿ ವೈಭವ್ ಚಿತ್ರದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.