‘ನಾತಿಚರಾಮಿ’, ‘ಹರಿವು’, ಹಾಗು ಇತ್ತೀಚಿಗಿನ ‘ಆಕ್ಟ್ 1978’ ಗಳಂತಹ ಮನಕಲುಕುವ ಚಿತ್ರಗಳಿಂದ ಸಮಾಜಕ್ಕೆ ವಿಶೇಷ ಸಂದೇಶಗಳನ್ನು ನೀಡಿದ ನಿರ್ದೇಶಕರು ಮಂಸೋರೆ ಅವರು. ನೈಜ ಹಾಗು ನೈಜತೆಗೆ ಹತ್ತಿರವಾದ ಕಥೆಗಳನ್ನ ತೆಗೆದುಕೊಂಡು, ತನ್ನದೇ ನಿರ್ಲಿಪ್ತ ರೀತಿಯಲ್ಲಿ ಜನರೆದುರಿಗೆ ಅದನ್ನ ಇರಿಸಿ, ಸೈ ಎನಿಸಿಕೊಂಡವರಿವರು. ಎರಡೆರಡು ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಕನ್ನಡದ ಹೆಮ್ಮೆಯ ಈ ನಿರ್ದೇಶಕರು ಈಗ ಹೊಸತೊಂದು ಚಿತ್ರವನ್ನ ಆರಂಭಿಸಲಿದ್ದಾರೆ.
ವಿಶೇಷವೆಂದರೆ ಈ ಬಾರಿಯು ಕೂಡ ಮಂಸೋರೆ ತೆಕ್ಕೆಯಲ್ಲಿರೋದು ಒಂದು ನೈಜ ಕಥೆಯೇ ಅಂತೆ. ಕೋರೋನ ಲಾಕ್ಡೌನ್ ಸಂಧರ್ಭದಲ್ಲಿ ಹೊಸ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದ ನಿರ್ದೇಶಕರು ಈಗ ಚಿತ್ರೀಕರಣ ಆರಂಭಿಸಿದ್ದಾರಂತೆ. ಬಿಡುಗಡೆ ಮಾಡಿರೋ ಪೋಸ್ಟರ್ ಹಲವರ ತಲೆ ಕೆಡಿಸಿತ್ತು. ಅದರಲ್ಲಿದ್ದ ಶೀರ್ಷಿಕೆ ಹಲವರ ಮನಸೆಳೆದಿತ್ತು. ‘19.20.21’ ಎಂಬ ಶೀರ್ಷಿಕೆ ಕೆಳಗೆ ‘ನೈಜ ಘಟನೆ ಆಧಾರಿತ’ ಎಂದು ಮಂಸೋರೆಪೋಸ್ಟರ್ ನಲ್ಲಿ ಬರೆಸಿದ್ದರು. ಇವರ ಚೊಚ್ಚಲ ಚಿತ್ರ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಹೀಗಾಗಿ ಈ ಪೋಸ್ಟರ್ ಕುತೂಹಲಗಳ ಸರಮಾಲೆಯನ್ನೇ ಸುರಿದಿತ್ತು.
ಮಂಸೋರೆ ಅವರ ಹೊಸ ಚಿತ್ರ ‘19.20.21’ಕ್ಕಿರುವ ತಂತ್ರಜ್ಞ ತಂಡ ಬಹುಪಾಲು ಹಳೆ ಗೆಳೆಯರದ್ದೇ. ‘ಆಕ್ಟ್ 1978’ ತಂಡವೇ ಮರಳಿ ನಮ್ಮ ಮುಂದೆ ಬರಲಿದೆ ಎಂಬ ಸುದ್ದಿಯಿದೆ. ಸದ್ಯ ಚಿತ್ರತಂಡದ ಜೊತೆ ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಮಂಸೋರೆ ಕರಾವಳಿ ಹಾಗು ಉತ್ತರ ಕರ್ನಾಟಕದ ಭಾಗಗಳಲ್ಲೂ ಚಿತ್ರೀಕರಣ ಮಾಡಲಿದ್ದಾರಂತೆ. ‘ಆಕ್ಟ್ 1978’ನಂತೆಯೇ ದೇವರಾಜ್ ಅವರ ನಿರ್ಮಾಣ ಹಾಗು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.