ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಆಗೊ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಯೂರಿ ಕ್ಯಾತರಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ಕೃಷ್ಣಲೀಲಾ ಸಿನಿಮಾದಲ್ಲಿ ಲೀಲಾ ಆಗಿ ನಟಿಸುವ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಮಯೂರಿ ಅಲ್ಲಿಯೂ ಸೈ ಎನಿಸಿಕೊಂಡ ಬೆಡಗಿ.
ಮುಂದೆ ಇಷ್ಟಕಾಮ್ಯ, ನಟರಾಜ ಸರ್ವೀಸ್, ಕರಿಯ 2, 8MM ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಮಯೂರಿ ಮದುವೆ, ಮಗ ಹೀಗೆ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು.
ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮಯೂರಿ ಮತ್ತೆ ಮರಳಿ ಬಂದಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ವ್ಹೀಲ್ ಚೇರ್ ರೋಮಿಯೋ ಸಿನಿಮಾ ಇಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆಕೆ ದೃಷ್ಟಿ ವಿಕಲಚೇತನ ವೇಶ್ಯೆಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
“ವ್ಹೀಲ್ ಚೇರ್ ರೋಮಿಯೋ ನನ್ನ ಸಿನಿ ಬದುಕಿನಲ್ಲಿ ಭಿನ್ನವಾದ ಸಿನಿಮಾ ಹೌದು. ಸರಳವಾಗಿ ಹೇಳಬೇಕೆಂದರೆ ಇದೊಂದು ಪ್ರಯೋಗಾತ್ಮಕ ಸಿನಿಮಾ. ನಾನು ಇದರಲ್ಲಿ ವೇಶ್ಯೆಯಾಗಿ ನಟಿಸುತ್ತಿದ್ದೇನೆ. ಈಗಾಗಲೇ ಸುಮಾರು ಜನ ನೀವು ಯಾಕೆ ವೇಶ್ಯೆಯಾಗಿ ಅಭಿನಯಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅವರಿಗೆಲ್ಲಾ ಸಿನಿಮಾವೇ ಉತ್ತರ ನೀಡಲಿದೆ” ಎನ್ನುತ್ತಾರೆ ಮಯೂರಿ.
“ಈ ಪಾತ್ರ ನಿಜವಾಗಿಯೂ ತುಂಬಾ ಚಾಲೆಂಜಿಗ್ ಆಗಿತ್ತು. ಕಣ್ಣಿಲ್ಲದ ಕುರುಡಿಯಂತೆ ನಟಿಸಬೇಕಾಗಿತ್ತು. ಅದು ಸವಾಲೇ ಸರಿ” ಎನ್ನುವ ಮಯೂರಿ “ನಮ್ಮ ಸಮಾಜದಲ್ಲಿ ವೇಶ್ಯೆ ಎಂಬ ಪದಕ್ಕೆ ಬೇರೆಯೇ ಆದ ಅರ್ಥವಿದೆ. ಯಾರೇ ಆಗಲಿ, ಇಷ್ಟಪಟ್ಟು ಈ ವೃತ್ತಿ ಖಂಡಿತಾ ಆಯ್ಕೆ ಮಾಡುವುದಿಲ್ಲ. ಅವರ ಆಯ್ಕೆಗೂ ಒಂದು ಕಾರಣ ಇದ್ದೇ ಇರುತ್ತದೆ. ಆ ಕಾರಣ ತಿಳಿದಾಗ ಅವರ ಮೇಲಿನ ನಮ್ಮ ಅಭಿಪ್ರಾಯ ಬದಲಾಗಬಹುದು” ಎಂಬುದು ಅವರ ಅಂಬೋಣ.
ಮದುವೆ, ಮಗ ಎಂದು ಸಂಸಾರ ಸಾಗರದಲ್ಲಿ ಮುಳುಗಿ ಹೋಗಿದ್ದ ಮಯೂರಿ ಮತ್ತೆ ಬಣ್ಣದ ಲೋಕದತ್ತ ಮರಳುವ ನಿರ್ಧಾರ ಮಾಡಿದ್ದರು. ಕಾಕಾತಾಳೀಯ ಎಂಬಂತೆ ಆ ಸಮಯದಲ್ಲಿಯೇ ವ್ಹೀಲ್ ಚೇರ್ ರೊಮಿಯೋ ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ಮಯೂರಿ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಬ್ಯುಸಿಯಾಗುತ್ತಾರಾ ಅಲ್ಲ ಕಿರುತೆರೆಗೂ ಕಾಲಿಡುತ್ತಾರಾ ಎಂದು ಕಾದುನೋಡಬೇಕಾಗಿದೆ