ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕ ಮಿಥುನ್ ಆಗಿ ಅಭಿನಯಿಸಿದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಸ್ವಾಮಿನಾಥನ್ ಅನಂತರಾಮನ್. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸ್ವಾಮಿನಾಥನ್ ಗೂ ಮೊದಲಿನಿಂದಲೂ ನಟನಾಗಬೇಕು ಎಂಬ ಹಂಬಲ. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆ.
ಅದೇ ಕಾರಣದಿಂದ ದೊರೆತ ಕೆಲಸಕ್ಕೆ ವಿದಾಯ ಹೇಳಿ ನಟನೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಈತ ಹೆಣ್ ಮಕ್ಕಳ ಪಾಲಿನ ಚಾಕಲೇಟ್ ಹೀರೋ. ಪದವಿ ಓದುವ ಸಮಯದಲ್ಲಿಯೇ ಟೆಲಿಫಿಲಂಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ಸದ್ಯ ಪರಭಾಷೆಯ ಕಿರುತೆರೆಯಲ್ಲೂ ಬ್ಯುಸಿ.
ದಿ ಪ್ಲಾನ್ ಮತ್ತು ವೆನ್ ದಿ ಡಾನ್ ಮೀಟ್ ದಿ ಡಸ್ಕ್ ಟೆಲಿಫಿಲಂಗಳಲ್ಲಿ ಅಭಿನಯಿಸಿದ್ದ ಸ್ವಾಮಿನಾಥನ್ ನಟನಾ ಜಗತ್ತಿನಲ್ಲಿ ಬದುಕು ರೂಪಿಸಿಕೊಳ್ಳುವ ದೃಢ ನಿರ್ಧಾರ ಮಾಡಿಯಾಗಿತ್ತು. ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಸ್ವಾಮಿನಾಥನ್ ಆಡಿಶನ್ ಗಳಿಗೆ ಹೋಗಲು ಶುರು ಮಾಡಿದರು. ಮಿಥುನ ರಾಶಿಯ ಮಿಥುನ್ ಆಗಿ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು.
ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿದ್ದ ಸ್ವಾಮಿನಾಥನ್ ಹಿರಿತೆರೆಗೂ ಕಾಲಿಟ್ಟಾಗಿದೆ. ಪರಮೇಶ್ ನಿರ್ದೇಶನದ ಇನ್ನು ಹೆಸರಿಡಬೇಕಾದ ಸಿನಿಮಾದಲ್ಲಿ ಆಯುರ್ವೇದ ಡಾಕ್ಟರ್ ಆಗಿ ಇವರು ನಟಿಸುತ್ತಿದ್ದಾರೆ.
ತೆಲುಗಿನ ಸ್ಟಾರ್ ಮಾ ದಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ನುವ್ವೆ ನೇನು ಪ್ರೇಮದಲ್ಲಿ ನಾಯಕರಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮತ್ತೊಮ್ಮೆ ಕಮಾಲ್ ಮಾಡುತ್ತಿದ್ದಾರೆ ಸ್ವಾಮಿನಾಥನ್. ಸ್ವಾಮಿನಾಥನ್ ಅವರಿಗೆ ಪರಭಾಷೆಯ ಕಿರುತೆರೆ ಹೊಸದೇನಲ್ಲ. ತಮಿಳಿನ ಕಾತ್ರುಕೇನ ವೆಳ್ಳಿ ಧಾರಾವಾಹಿಯಲ್ಲಿಯೂ ಇವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.