ಭಾರತೀಯ ಚಿತ್ರರಂಗಕ್ಕೆ ಸ್ವಂತವಾಗಿರುವ ನಟ ಕಮಲ್ ಹಾಸನ್ ಅವರು. ವಿವಿಧ ಭಾಷೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಈ ದಿಗ್ಗಜನ 232ನೇ ಸಿನಿಮಾ ‘ವಿಕ್ರಮ್’. ಜೂನ್ 3ನೇ ತಾರೀಕಿನಂದು ತೆರೆಕಂಡಂತಹ ಈ ಚಿತ್ರ ಪ್ರಪಂಚದಾದ್ಯಂತ ಸಿನಿರಸಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆಕ್ಷನ್-ಡ್ರಾಮಾ ರೀತಿಯ ಈ ಸಿನಿಮಾ ಈಗಲೂ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಲೋಕೇಶ್ ಕಣಗರಾಜ್ ಅವರ ಸೃಷ್ಟಿಯಾಗಿರೋ ಈ ‘ವಿಕ್ರಮ್’ ಸಿನಿಮಾ ಇದೀಗ ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಂತಹ ನಿರ್ಧಾರವನ್ನ ತೆಗೆದುಕೊಂಡಿದೆ. ತನ್ನ ಒಟಿಟಿ ಓಟ ಆರಂಭವಾಗೋ ದಿನಾಂಕವನ್ನ ಅಧಿಕೃತವಾಗಿ ಘೋಷಣೆ ಮಾಡಿದೆ.
‘ಕೈಥಿ’, ‘ಮಾಸ್ಟರ್’ ಸೇರಿದಂತೆ ತಮಿಳು ಚಿತ್ರರಂಗಕ್ಕೆ ಮೂರು ಹಿಟ್ ಚಿತ್ರಗಳನ್ನ ಕೊಟ್ಟಂತಹ ಲೋಕೇಶ್ ಕಣಗರಾಜ್ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದೆ. ಇದರ ತಾರಾಗಣ ಕೂಡ ಸಿನಿರಸಿಕರ ಮೈಗೆ ರೋಮಾಂಚನ ನೀಡುವಂತದ್ದು. ದಿಗ್ಗಜ ಕಮಲ್ ಹಾಸನ್ ಅವರ ಜೊತೆಗೆ ವಿಜಯ್ ಸೇತುಪತಿ, ಮಲಯಾಳಂನ ಫಹಾದ್ ಫಾಸಿಲ್, ಅರ್ಜುನ್ ದಾಸ್, ಶಿವಾನಿ ನಾರಾಯಣ್ ಹಾಗು ವಿಶೇಷ ಪಾತ್ರವೊಂದರಲ್ಲಿ ಸೂರಿಯ ಅವರು ಕೂಡ ಕಾಣಿಸಿಕೊಂಡಿದ್ದರು. ಎಲ್ಲೆಡೆ ಜನಮನ್ನಣೆ ಪಡೆದ ಈ ಸಿನಿಮಾ ಇದೇ ಜುಲೈ 8ರಿಂದ ‘ಡಿಸ್ನೆಯ್ ಪ್ಲಸ್ ಹಾಟ್ ಸ್ಟಾರ್(DISNEY+ HOTSTAR)’ ನಲ್ಲಿ ಪ್ರದರ್ಶನ ಕಾಣಲಿದೆ. ತಮಿಳಿನ ಜೊತೆಗೆ, ತೆಲುಗು, ಮಲಯಾಳಂ, ಹಿಂದಿ ಹಾಗು ಕನ್ನಡ ಭಾಷೆಗಳಲ್ಲೂ ಲಭ್ಯವಾಗಲಿದೆ.
ಸದ್ಯ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ಹಾಗು ಬಹುಭರವಸೆಯ ನಿರ್ದೇಶಕರಲ್ಲಿ ಲೋಕೇಶ್ ಕಣಗರಾಜ್ ಅವರು ಮುಂಚೂಣಿಯಲ್ಲಿದ್ದಾರೆ. ‘ವಿಕ್ರಮ್’ ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ಕಂಡಂತಹ ಪ್ರೇಕ್ಷಕರು ಇದು ಲೋಕೇಶ್ ಅವರದೇ ಚಿತ್ರವಾದ ‘ಕೈಥಿ’ಯ ಅಂಶಗಳನ್ನೆಲ್ಲ ಇಟ್ಟುಕೊಂಡಿದೆ, ಒಂದು ರೀತಿಯಲ್ಲಿ ‘ಕೈಥಿ’ ಸಿನಿಮಾದ ಮುಂದುವರೆದ ಭಾಗವಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ಈ ಎಲ್ಲ ಸಿನಿಮಾಗಳನ್ನ ಇಟ್ಟುಕೊಂಡು ಲೋಕೇಶ್ ಅವರು ತಮ್ಮದೇ ಸಿನಿಮಾಟಿಕ್ ಯೂನಿವರ್ಸ್(CINEMATIC UNIVERSE) ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದೂ, ಇದನ್ನು ಸ್ವತಃ ಲೋಕೇಶ್ ಅವರು ಕೂಡ ಒಪ್ಪಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಈ ಉತ್ತಮ ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ನೋಡಲಾಗದೆ ಇದ್ದವರು ಇದೇ ಜುಲೈ 8ರಿಂದ ‘ಹಾಟ್ ಸ್ಟಾರ್’ ಆಪ್ ನಲ್ಲಿ ಐದು ಭಾಷೆಗಳಲ್ಲಿ ನೋಡಬಹುದಾಗಿದೆ.