ನಟ ಶ್ರೀಮುರಳಿ ಭಗೀರ ಚಿತ್ರದ ಮೂಲಕ ಮತ್ತೆ ರಂಜಿಸಲು ಬರುತ್ತಿದ್ದಾರೆ. ಲಕ್ಕಿ ಸಿನಿಮಾ ನಿರ್ದೇಶಕ ಡಾ. ಸೂರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಚಿತ್ರ ತಂಡ ಹಾಗೂ ಆಪ್ತರ ಸಮ್ಮುಖದಲ್ಲಿ ಮೊನ್ನೆ ಚಿತ್ರದ ಮುಹೂರ್ತ ನಡೆದಿದೆ.
“ನಾವು ಅಧಿಕೃತವಾಗಿ ಚಿತ್ರವನ್ನು ಮುಹೂರ್ತದ ಮೂಲಕ ಆರಂಭಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ಆರಂಭಿಸಬೇಕೆಂದಿದ್ದೇವೆ. ವಿಶೇಷ ಫೋಟೋ ಶೂಟ್ ಈ ಸಿನಿಮಾಗಾಗಿ ಮಾಡಬೇಕೆಂದಿದ್ದೇವೆ” ಎಂದಿದ್ದಾರೆ. ಮದಗಜ ಸಿನಿಮಾ ನಂತರ ತನ್ನ ಲುಕ್ ಗಾಗಿ ಶ್ರೀಮುರಳಿ ಸಿದ್ದತೆ ನಡೆಸಿದ್ದಾರೆ.
“ನನ್ನ ಸಮತೋಲಿತ ಡಯಟ್ ಹಾಗೂ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದೆ. ಪಾತ್ರದ ಬಗ್ಗೆ ಏನೂ ಹೇಳಲ್ಲ. ಆದರೆ ಈ ಸಿನಿಮಾದಲ್ಲಿ ಫಿಟ್ ಅವತಾರದಲ್ಲಿ ಕಾಣುತ್ತೀರಿ ಎಂಬ ಭರವಸೆ ನೀಡಬಲ್ಲೆ. ಜನರಿಗೆ ಭಗೀರ ಯಾರು ಹಾಗೂ ಸಿನಿಮಾ ಬಗ್ಗೆ ತಿಳಿಯಬೇಕು ಎಂದು ಗೊತ್ತಿದೆ.ಆದರೆ ಮುಂದಿನ ಸಮಯದಲ್ಲಿ ತಿಳಿಸಲಾಗುವುದು” ಎಂದಿದ್ದಾರೆ.
“ಈ ತಂಡದಲ್ಲಿ ಎಲ್ಲರೂ ಪ್ಯಾಷನೇಟ್ ಹಾಗೂ ಪರಿಶ್ರಮದಿಂದ ಕೆಲಸ ಮಾಡುವವರು ಇದ್ದಾರೆ. ನಾನು ಕೂಡಾ ಕೆಲಸವನ್ನು ಇಷ್ಟಪಡುವವನು. ನಾವು ಸಿನಿಮಾ ಪ್ರೀತಿಯನ್ನು ಹಂಚುತ್ತೇವೆ” ಎಂದಿದ್ದಾರೆ.