2018ರ ‘ಗುಲ್ಟೂ’ ಚಿತ್ರ ಕನ್ನಡಿಗರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸೈಬರ್ ಕ್ರೈಂ ಗೆ ಸಂಭಂದಿಸಿದ ಈ ಚಿತ್ರ ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಜನಾರ್ಧನ್ ಚಿಕ್ಕಣ್ಣ ಅವರ ಮೊದಲ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ನವೀನ್ ಶಂಕರ್, ಸೋನು ಗೌಡ, ರಂಗಾಯಣ ರಘು, ಅವಿನಾಶ್, ಪವನ್ ಕುಮಾರ್ ಮುಂತಾದ ನಟರು ಬಣ್ಣ ಹಚ್ಚಿದ್ದರು. ನಾಯಕನಟನ ಪಾತ್ರವಹಿಸಿದ್ದ ನವೀನ್ ಶಂಕರ್ ಅವರು ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಮೊದಲ ಚಿತ್ರದಿಂದಲೇ ಗುರುತಿಸುವಂತೆ ಮಾಡಿದ್ದರು. ‘ಗುಲ್ಟೂ’ ಚಿತ್ರದ ನಂತರ ಸಾಲು ಸಾಲು ಆಫರ್ ಗಳನ್ನ ಪಡೆದ ಇವರಿಗೆ ಇಂದು ಹುಟ್ಟುಹಬ್ಬದ ಸಡಗರ. ಈ ಸಂಧರ್ಭದಲ್ಲಿ ಅವರ ಮುಂದಿನ ಚಿತ್ರಗಳ ಬಗೆಗಿನ ಮಾಹಿತಿ ನೀಡಿದ್ದಾರೆ ನವೀನ್ ಶಂಕರ್.
ಜನುಮದಿನದ ಸಲುವಾಗಿ ನವೀನ್ ಶಂಕರ್ ಅವರ ಮುಂದಿನ ಚಿತ್ರಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಶ್ರೀಧರ್ ಶಿಕಾರಿಪುರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಕ್ರೈಂ ಥ್ರಿಲರ್ ಚಿತ್ರದಲ್ಲಿ ನಾಯಕ ‘ಆದಿ’ ಆಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್. ಈ ಚಿತ್ರತಂಡದಿಂದ ಪೋಸ್ಟರ್ ರಿಲೀಸ್ ಆಗಿದ್ದು, ತುಂಬಾ ರಗಡ್ ಲುಕ್ ನಲ್ಲಿ ನವೀನ್ ಕಾಣಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿರುವ ನವೀನ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಮುಂತಾದವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದರ ಜೊತೆಗೆ ರಾಮೇನಹಳ್ಳಿ ಜಗನ್ನಾಥ್ ಅವರು ನಿರ್ದೇಶಸುತ್ತಿರುವ ‘ಹೊಂದಿಸಿ ಬರೆಯಿರಿ’ ಎಂಬ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗು ಶ್ರೀ ಮಹದೇವ್ ಅವರ ಜೊತೆಗೆ ಮೂರನೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್ ಶಂಕರ್. ಸಿನಿಮಾದಲ್ಲಿ ಅರ್ಚನಾ ಜೋಯಿಸ್ ಹಾಗು ಭಾವನಾ ಅವರು ಕೂಡ ನಟಿಸುತ್ತಿದ್ದಾರೆ. ಕಾಲೇಜ್ ಜೀವನದ ಬಗ್ಗೆ ಇರುವ ಸಿನಿಮಾ ಇದಾಗಿರಲಿದೆ.
ಮೂರನೇಯದಾಗಿ ಕುಲದೀಪ್ ಕರಿಯಪ್ಪ ಅವರ ರಚನೆಯ ‘ನೋಡಿದವರು ಏನಂತಾರೆ’ ಎಂಬ ಸಿನಿಮಾದಲ್ಲಿಯೂ ಸಹ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ನವೀನ್. ಚಿತ್ರೀಕಾರಣವನ್ನು ಮುಗಿಸಿಕೊಂಡಿರುವ ಈ ಚಿತ್ರ ಒಂದು ‘ಟ್ರಾವೆಲ್ ಡ್ರಾಮಾ’ ಆಗಿರಲಿದೆಯಂತೆ. ಅಪೂರ್ವ ಭಾರಧ್ವಜ್ ಅವರು ನಾಯಕಿಯಾಗಿ ನಟಿಸಲಿದ್ದು, ಇಬ್ಬರ ನಡುವಿನ ಪಯಣದ ಬಗ್ಗೆ ಕಥೆ ಹೆಣೆಯಲಾಗಿದೆ. ಬೆಂಗಳೂರು, ಮಡಿಕೇರಿ, ಗೋಕರ್ಣ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಸದ್ಯದಲ್ಲೇ ಬಿಡುಗಡೆ ಕಾಣುವ ಸಾಧ್ಯತೆಯಿದೆ.
ಇವೆಲ್ಲದರ ನಡುವೆ ಒಂದು ಸಾಮಾಜಿಕ ಕಥೆಯಲ್ಲಿಯೂ ನಟಿಸಲಿದ್ದಾರೆ ನವೀನ್. ಶ್ರೀಕಾಂತ್ ಕಟಗಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಕ್ಷೇತ್ರಪತಿ’ ಎಂಬ ಚಿತ್ರದಲ್ಲಿ ರೈತರ ಹಕ್ಕುಗಳ ಬಗೆಗಿನ ಹೋರಾಟದ ಬಗ್ಗೆ ಚಿತ್ರೀಕರಿಸಲಾಗಿದೆ. ಸುಮಾರು ಐದು ವರ್ಷಗಳ ಕಾಲ ಸಂಶೋಧನೆ ನಡೆಸಿ ರೈತಪರ ಹೋರಾಟಗಳ ಬಗ್ಗೆ ಮಾಹಿತಿ ಕಲೆಹಾಕಿ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ಶ್ರೀಕಾಂತ್ ಕಟಗಿ ಅವರು. ಮೂಲತಃ ಉತ್ತರ ಕರ್ನಾಟಕದವರಾಗಿರುವ ನವೀನ್ ಅವರಿಗೆ ಗದಗ ಶೈಲಿಯಲ್ಲಿರುವ ಈ ಸಿನಿಮಾದಲ್ಲಿನ ನಟನೆ ಮನಸ್ಸಿಗೆ ಹತ್ತಿರವಾಗಿದೆಯಂತೆ. ರವಿ ಬಸ್ರುರ್ ಅವರ ಸಂಗೀತ ಈ ಚಿತ್ರದಲ್ಲಿರಲಿದ್ದು ಇಂದು(ಮೇ 26) ಚಿತ್ರದ ಪೋಸ್ಟರ್ ಅನ್ನು ಧನಂಜಯ್ ಅವರು ಬಿಡುಗಡೆಗೊಳಿಸಿದ್ದಾರೆ.
ವಿಶೇಷವೆಂದರೆ, ಈ ಎಲ್ಲ ಚಿತ್ರಗಳಲ್ಲಿಯೂ ನವೀನ್ ಅವರು ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೇರೆ ಬೇರೆ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಇವರ ಪಯಣ ಬೆಳೆಯುತ್ತಾ ಸಾಗಲಿ ಎಂದು ಆಶಿಸುತ್ತೇವೆ.