ತೆಲುಗುವಿನಲ್ಲಿ ಮೋಡಿ ಮಾಡುತ್ತಿರೋ ಕನ್ನಡ ನಟಿಮಣಿಯರು ಹಲವರು. ಈ ಸಾಲಿಗೆ ಹೊಸ ಸೇರ್ಪಡೆಗಳು ಆಗುತ್ತಲೇ ಇರುತ್ತವೆ. ಸದ್ಯ ಟೋಲಿವುಡ್ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿರೋ ನಟಿ ಮಂಗಳೂರಿನ ಕುವರಿ ನೇಹಾ ಶೆಟ್ಟಿ.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂಗಾರುಮಳೆ 2 ಚಿತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ನೇಹಾ ಶೆಟ್ಟಿ ಹಲವಾರು ಪಡ್ಡೆ ಹುಡುಗರ ಕಣ್ಣಿಗೆ ಮಿಂಚಂತೆ ಸೆಳೆದಿದ್ದರು. ನಂತರ ನಟಿ ಕಂಡುಬಂದಿದ್ದು ತೆಲುಗಿನ ಮೆಹಬೂಬ ಚಿತ್ರದಲ್ಲಿ. ಆಮೇಲೆ ಕೈಗೆ ಸಿಗದ ನೇಹಾ ಶೆಟ್ಟಿ ಗಲ್ಲಿ ರೌಡಿ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹೀಗೆ ಹಲವಾರು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಇತ್ತೀಚಿಗಷ್ಟೇ ಬಿಡುಗಡೆಯಾದ ‘DJ ಟಿಲ್ಲು’ ಸಿನಿಮಾದಲ್ಲಿನ ತಮ್ಮ ನಟನೆಗೆ ಎಲ್ಲ ರೀತಿಯ ಪ್ರೇಕ್ಷಕರಿಂದಲೂ ಪ್ರಶಂಸೆಗೊಳಗಾಗುತ್ತಿದ್ದಾರೆ ನೇಹಾ ಶೆಟ್ಟಿ.
DJ ಟಿಲ್ಲುವಿನ ಯಶಸ್ಸಿನ ಸಂತಸದಲ್ಲಿ ಕುಣಿಯುತ್ತಿರೋ ಕುಡ್ಲದ ಕುವರಿಗೆ ಸಾಲು ಸಾಲು ಚಿತ್ರಗಳ ಬೇಡಿಕೆಗಳು ಬರುತ್ತಿವೆಯಂತೆ. ಸದ್ಯ ಈಕೆ ಟೋಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಬಣ್ಣ ಹಚ್ಚಿದ್ದಾರೆ. ಯಾವುದೇ ಸಿನಿಮಾಗಾಗಿ ಅಲ್ಲದಿದ್ದರೂ ಜೋಮ್ಯಾಟೋ ಸಂಸ್ಥೆಯ ಒಂದು ಜಾಹೀರಾತಿಗಾಗಿ ಅಲ್ಲು ಅರ್ಜುನ್ ಗೆ ಜೊತೆಯಾಗಿದ್ದಾರೆ. ಜೋಮ್ಯಾಟೋ ಸಂಸ್ಥೆಯ ರಾಯಭಾರಿಯಾಗಿರೋ ಅಲ್ಲು ಅರ್ಜುನ್ ಅವರು ಹಲವಾರು ಜಾಹೀರಾತುಗಳಲ್ಲಿ ಜೋಮ್ಯಾಟೋವಿನ ಪರ ನಟಿಸಿದ್ದಾರೆ. ಸದ್ಯ ನೇಹಾ ಶೆಟ್ಟಿ ಇವರೊಂದಿಗೆ ಕಂಡಿರುವುದು ನಟಿಯ ಅಭಿಮಾನಿಗಳಿಗೆ ಸಂತಸ ತಂದಿದೆ.