ಇಡೀ ಭಾರತದಲ್ಲೇ ಸಂಚಲನ ಸೃಷ್ಟಿಸುತ್ತಿರೋ ಕನ್ನಡದ ಹೊಸ ಪಾನ್-ಇಂಡಿಯನ್ ಸಿನಿಮಾ ‘ಕಬ್ಜ’. ಆರ್. ಚಂದ್ರು ನಿರ್ದೇಶನದ ಈ ಚಿತ್ರ ತಾನು ಬಿಡುಗಡೆಗೊಳಿಸಿದಂತ ನಿಮಿಷವನ್ನು ಮೀರದ ಟೀಸರ್ ಗಳಿಂದಲೇ ಬಹಳ ನಿರೀಕ್ಷೆಗಳನ್ನ ಹುಟ್ಟುಹಾಕುತ್ತಿದೆ.
ಇನ್ನು ಇದರ ತಾರಾಗಣ ಜನರ ಆಕಾಂಕ್ಷೆಗಳನ್ನು ಮುಗಿಲಿನೆತ್ತರಕ್ಕೆ ಏರಿಸುತ್ತಲಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಬಣ್ಣ ಹಚ್ಚಿದರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ‘ಭಾರ್ಗವ ಭಕ್ಷಿ’ ಎಂಬ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಂಡಿರೋ ಭಾರ್ಗವ ಭಕ್ಷಿಯ ಮೊದಲ್ನೋಟದ ಪೋಸ್ಟರ್ ಒಂದು ಕೂಡ ಬಹಳ ಹಿಂದೆಯೇ ಮಿಂಚೊಂದನ್ನು ಹುಟ್ಟು ಹಾಕಿತ್ತು. ಇತ್ತೀಚಿಗಷ್ಟೇ ಕಬ್ಜದ ರಾಣಿಯನ್ನ ಜನರೆದುರಿಗಿರಿಸುವ ಮೂಲಕ ಚಿತ್ರತಂಡ ‘ಶ್ರೀಯ ಶರಣ್’ ಅವರನ್ನು ತಮ್ಮ ಚಿತ್ರದ ನಾಯಕಿಯಾಗಿ ವಿಡಿಯೋ ಒಂದರ ಮೂಲಕ ಘೋಷಿಸಿತ್ತು. ಈಗ ಈ ತಾರಾಗಣ ಇನ್ನಷ್ಟು ದೊಡ್ಡದಾಗುತ್ತಿದೆ.
ತೆಲುಗಿನ ಪ್ರಖ್ಯಾತ ನಟರಾದ ಪೊಸನ್ನಿ ಕೃಷ್ಣ ಮುರಳಿ ಹಾಗು ಮುರಳಿ ಶರ್ಮ ಅವರು ‘ಕಬ್ಜ’ ಚಿತ್ರಕ್ಕೆ ಬಣ್ಣ ಹಚ್ಚಲಿರುವಂತ ಇನ್ನಿಬ್ಬರು ಪಾನ್-ಇಂಡಿಯನ್ ಘಟ್ಟದ ನಟರು. ತಮ್ಮ ನಟನೆಯಿಂದ ಭಾರತದೆಲ್ಲೆಡೆಯ ಸಿನಿರಸಿಕರಿಂದ ಸೈ ಎನಿಸಿಕೊಂಡ ನಟರಿವರು. ಸದ್ಯ ಚಿತ್ರತಂಡಕ್ಕೆ ಇವರ ಸೇರ್ಪಡೆ ಆಗಿರುವುದು ಚಿತ್ರದ ಮೇಲಿನ ಆಕಾಂಕ್ಷೆಗಳನ್ನ ಇನ್ನಷ್ಟು ಹೆಚ್ಚಿಸುತ್ತಿದೆ. ಉಪ್ಪಿ-ಕಿಚ್ಚರಂತಹ ಕನ್ನಡದ ಮೇರುನಟರು ಅಭಿನಯಿಸುತ್ತಿರೋ ‘ಕಬ್ಜ’ ಸಿನಿಮಾದ ತಾರಗಣದಲ್ಲಿ ಭಾರತದ ವಿವಿಧ ಚಿತ್ರರಂಗಗಳ ಹಲವು ಹೆಸರಾಂತ ಕಲಾವಿದರಿರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.