ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರು ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆಗಳು ನಮ್ಮನ್ನೆಂದಿಗೂ ಅಗಲುವುದಿಲ್ಲ. ಅದರಲ್ಲಿ ಒಂದು ಅವರ ನಿರ್ಮಾಣ ಸಂಸ್ಥೆಯಾದ ‘ಪಿ ಆರ್ ಕೆ ಪ್ರೊಡಕ್ಷನ್ಸ್’. ಈಗಾಗಲೇ ಹಲವಾರು ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಈ ಸಂಸ್ಥೆ, ಸದ್ಯ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನೇತೃತ್ವದಲ್ಲಿ ಮುಂದುವರಿಯುತ್ತಿದೆ. ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮುಂದಿನ ಚಿತ್ರ ‘ಆಚಾರ್ ಅಂಡ್ ಕೋ’.
‘ಪಿ ಆರ್ ಕೆ’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರೋ ಹತ್ತನೇ ಚಿತ್ರ ಇದಾಗಿದ್ದು, ಮೊದಲ ಬಾರಿಗೆ ನಿರ್ಮಾಣ ಸಂಸ್ಥೆ ಮಹಿಳಾ ನಿರ್ದೇಶಕಿಗೆ ಚಿತ್ರದ ಸಾರಥ್ಯವನ್ನು ವಹಿಸಿದ್ದಾರೆ. ಇವರದೇ ಸಿನಿಮಾವಾದ ‘ಫ್ರೆಂಚ್ ಬಿರಿಯಾನಿ’ಯಲ್ಲಿ ‘ರಾಹಿಲಾ’ ಎಂಬ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದ ಸಿಂಧು ಶ್ರೀನಿವಾಸ್ ಮೂರ್ತಿ ಅವರು ಈ ಸಿನಿಮಾದ ನಿರ್ದೇಶಕಿ. ‘ಫ್ರೆಂಚ್ ಬಿರಿಯಾನಿ’ ಚಿತ್ರದ ಚಿತ್ರೀಕರಣದ ಸಂಧರ್ಭದಲ್ಲಿ ತಾವು ಕಟ್ಟಿಕೊಂಡಿದ್ದ ಕಥೆಯನ್ನು ಅಪ್ಪು ಎದುರು ಇಟ್ಟಿದ್ದರಂತೆ ಈಕೆ. ಅದರ ಜೊತೆಗೆ ಸಣ್ಣ ನಿದರ್ಶನದಂತೆ ಆ ಕಥೆಯ ಮೇಲೆಯೇ ಕಿರುಚಿತ್ರವೊಂದನ್ನು ಮಾಡಿ ತೋರಿಸಿದ್ದರು. ಕಥೆಯನನ್ನು ಹಾಗು ಕಿರುಚಿತ್ರವನ್ನು ಮೆಚ್ಚಿಕೊಂಡ ಅಪ್ಪು ತಮ್ಮದೇ ಬ್ಯಾನರ್ ನಲ್ಲಿ ಈ ಚಿತ್ರವನ್ನು ಮಾಡುವಂತೆ ಹೇಳಿದ್ದರು. ಈ ಮೂಲಕ ಹುಟ್ಟಿಕೊಂಡ ಚಿತ್ರವೇ ‘ಆಚಾರ್ ಅಂಡ್ ಕೋ’.
60ನೇ ದಶಕದ ಬೆಂಗಳೂರಿನಲ್ಲಿ ನಡೆಯುವಂತ ಒಂದು ಕಾಲ್ಪನಿಕ ಕಥೆಯನ್ನ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಈ ಕಾರಣಕ್ಕೆ ಮೈಸೂರಿನಲ್ಲಿಯೇ ಬೆಂಗಳೂರನ್ನು ಹೋಲುವ ಶೂಟಿಂಗ್ ಸೆಟ್ ಹಾಕಿಸಿಕೊಂಡು ಅಲ್ಲಿಯೇ ಸಿನಿಮಾದ ಬಹುಪಾಲು ಚಿತ್ರೀಕರಣವನ್ನು ಮುಗಿಸಿಕೊಂಡಿದೆ ಚಿತ್ರತಂಡ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ‘ಆಚಾರ್ ಅಂಡ್ ಕೋ’ ನಿರತರಾಗಿದ್ದು, ಆದಷ್ಟು ಬೇಗ ಬಿಡುಗಡೆಗೊಳಿಸುವ ಭರದಲ್ಲಿದೆ. “ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ನಿರ್ದೇಶನ ಹಾಗು ನಟನೆ ಎರಡನ್ನು ನಿರ್ವಹಿಸಿರುವುದು ಸಂತಸ ತಂದಿದೆ” ಎನ್ನುತ್ತಾರೆ ಸಿಂಧು. ಹಿರಿಯ ನಟರಾದ ಅಶೋಕ್, ಸುಧಾ ಬೆಳವಾಡಿ ಅವರನ್ನು ಹೊರತು ಪಡಿಸಿ ಉಳಿದೆಲ್ಲ ಹೊಸ ಪ್ರತಿಭೆಗಳೇ ತಾರಾಗಣದಲ್ಲಿರುವುದು ಇನ್ನೊಂದು ವಿಶೇಷ. ಬಿಂದು ಮಾಲಿನಿ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದು, ಅಭಿಮನ್ಯು ಸದಾನಂದನ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಚಿತ್ರ ಒಟಿಟಿ ಪಾಲಾಗುತ್ತದೋ, ಚಿತ್ರಮಂದಿರಗಳನ್ನ ಸೇರುತ್ತದೋ ಕಾದುನೋಡಬೇಕಿದೆ.