ನಟ ಪ್ರಜ್ವಲ್ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅವರ 29ನೇ ಸಿನಿಮಾ ‘ಅಬ್ಬರ’ ತೆರೆಗೆ ಬರಲು ರೆಡಿ ಆಗಿದೆ. ‘ಸಾಗರ್’ ಚಿತ್ರದ ನಂತರ ಮತ್ತೊಮ್ಮೆ ಮೂವರು ನಾಯಕಿಯರ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ ಪ್ರಜ್ವಲ್. ‘ಟೈಸನ್’, ‘ಕ್ರ‍್ಯಾಕ್’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಕೆ. ರಾಮ್‌ನಾರಾಯಣ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ‘ಅಬ್ಬರ’ ಚಿತ್ರವನ್ನು ಮಾಡಿದ್ದಾರೆ. ಸಿ & ಎಂ ಮೂವೀಸ್ ಲಾಂಛನದಡಿಯಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು, ‘ಅಬ್ಬರ’ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.
ಹೌದು, ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ನಟಿಸಿದ್ದಾರೆ. ಆಗಸ್ಟ್ 12ರಂದು ಈ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕ ಬಸವರಾಜ ಮಂಚಯ್ಯ ಯೋಚಿಸಿದ್ದಾರೆ.
ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿರುವ ಪ್ರಜ್ವಲ್, ‘ಇದು ನನ್ನ ನಟನೆಯ 29ನೇ ಸಿನಿಮಾ. ಬಹಳ ಅದ್ಭುತವಾದ ಟೈಟಲ್. ಕಥೆ ಕೇಳಿದಾಗಲೇ, ‘ನನಗೆ ತುಂಬಾ ಕೆಲಸ ಕೊಡ್ತೀರಾ’ ಅಂತ ನಿರ್ದೇಶಕರಿಗೆ ಹೇಳಿದ್ದೆ. ಚಿತ್ರದಲ್ಲಿ ನನಗೆ ಮೂರು ಪಾತ್ರಗಳಿವೆ. ಇದೊಂದು ಮಜವಾದ ಚಿತ್ರ. ಕಥೆ ಕೇಳುವಾಗಲೇ ಬಹಳ ಕುತೂಹಲಕರವಾಗಿತ್ತು. ಕೊನೆಯ ಶಾಟ್ ವರೆಗೂ ಆ ಕುತೂಹಲವನ್ನು ನಿರ್ದೇಶಕರು ಉಳಿಸಿಕೊಂಡಿದ್ದಾರೆ. ಒಂದೇ ದಿನ ಮೂರೂ ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಎಳೆ ಚಿತ್ರದಲ್ಲಿದೆ. ಅದು ಚಿತ್ರದ ಕೊನೆವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ಮೂವರು ನಾಯಕಿಯರ ಜೊತೆಗೂ 3 ಗೆಟಪ್‌ಗಳಿವೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ’ ಎಂದು ಹೇಳಿದರು.
ಈ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ಚಿತ್ರತಂಡ, ಸಿನಿಮಾದ ಕುರಿತು ತಿಳಿಸಲೆಂದೇ 7 ದಿನ ಕರ್ನಾಟಕದಾದ್ಯಂತ ರ‍್ಯಾಲಿ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ಕುರಿತಂತೆ ಮಾತನಾಡಿದ ರಾಮ್ ನಾರಾಯಣ್ ”ಪ್ರಜ್ವಲ್‌ಗೆ ಬೇರೆ ಚಿತ್ರದ ಶೂಟಿಂಗ್ ಇದ್ದರೂ, ಅದನ್ನೆಲ್ಲ ಮುಂದೆ ಹಾಕಿ ಪ್ರಮೋಷನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕಮ್ಮಿ ಮಾಡಿಲ್ಲ. ರವಿಶಂಕರ್ ಅವರ ಹೀರೋ ಪಾತ್ರಕ್ಕೆ ಸರಿಸಮನಾದ ವಿಲನ್ ಕ್ಯಾರೆಕ್ಟರ್ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ಇಲ್ಲಿ ಎಲ್ಲರ ಕೆಲಸಗಳಲ್ಲೂ ಅಬ್ಬರ ಇದೆ. 50 ದಿನಗಳವರೆಗೆ ಶೂಟಿಂಗ್ ನಡೆಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ” ಎಂದರು.
ಅಲ್ಲದೆ ”ನಮ್ಮ ಸಿನಿಮಾದ ಕೆಲಸಗಳು ಮುಗಿದು ಎರಡು ತಿಂಗಳಾಗಿದೆ. ಆದರೆ, ಪ್ರತಿ ವಾರ ಎಂಟ್ಹತ್ತು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ, ನಾವು ಮುಂದೆ ಹೋಗುವ ಅನಿವಾರ್ಯತೆಯಿತ್ತು. ಇನ್ನೆಷ್ಟು ದಿನ ಮುಂದೂಡುವುದು? ನಾವು ಬೇರೆ ಚಿತ್ರಗಳಿಗೆ ಹೆದರಿ ಭಯಪಡುತ್ತಿದ್ದರೆ, ನಮ್ಮ ಚಿತ್ರದಲ್ಲಿ ಕಂಟೆಂಟ್ ಇಲ್ಲ ಅಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಕಂಟೆಂಟ್ ಇದೆ. ಎಷ್ಟೇ ಸಿನಿಮಾಗಳಿದ್ದರೂ, ಜನರಿಗೆ ಇಷ್ಟವಾದರೆ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮದು ಸಣ್ಣ ಸಿನಿಮಾ ಅಲ್ಲ, ದೊಡ್ಡ ಸಿನಿಮಾ’ ಎನ್ನುತ್ತಾರೆ ರಾಮ್ನಾರಾಯಣ್.
ಪ್ರಜ್ವಲ್ ದೇವರಾಜ್, ರವಿಶಂಕರ್ ಅಲ್ಲದೆ ಶೋಭರಾಜ್, ಕೋಟೆ ಪ್ರಭಾಕರ್, ಶಂಕರ್ ಅಶ್ವತ್ಥ್, ವಿಕ್ಟರಿ ವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್ ಮುಂತಾದವರು ‘ಅಬ್ಬರ’ದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ರಾಮ್ ನಾರಾಯಣ್, ವಿಜಯ ಭರಮಸಾಗರ ಸಾಹಿತ್ಯ ಬರೆದಿದ್ದಾರೆ. ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.