ಡೈನಾಮಿಕ್ ಪ್ರಿನ್ಸ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿದ್ದಾರೆ. ಇದೇ ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಿದ್ದು ಈ ಬಾರಿ ಅವರು ಅದನ್ನು ಆಚರಿಸುತ್ತಿಲ್ಲ. ಅದಕ್ಕೆ ಕಾರಣ ಅಭಿಮಾನಿಯ ಮೇಲೆ ಪ್ರಜ್ವಲ್ ಅವರಿಗಿರುವ ಪ್ರೀತಿ.
ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಪ್ರಜ್ವಲ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿಯಾದರೂ ಅವರು ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೆ ಎಂಬ ಅಭಿಮಾನಿಗಳಿಗೆ ಇದೀಗ ನಿರಾಸೆ ಆಗಿದೆ. ಯಾಕೆಂದರೆ ಡೈನಾಮಿಕ್ ಪ್ರಿನ್ಸ್ ಈ ಬಾರಿಯೂ ಕೂಡಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು ಆ ಕಾರಣದಿಂದಾಗಿ ಪ್ರಜ್ವಲ್ ಅವರು ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಕುರಿತು ವಿಡಿಯೋ ಹಂಚಿಕೊಂಡಿರುವ ಪ್ರಜ್ವಲ್ ದೇವರಾಜ್ ” ಈ ಸಲವೂ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ. ವರ್ಷಂಪ್ರತಿ ನನ್ನ ಹುಟ್ಟಿದ ದಿನವನ್ನು ಹಬ್ಬದಂತೆ ನೀವು ಆಚರಣೆ ಮಾಡುತ್ತಿದ್ದೀರಿ. ಮಾತ್ರವಲ್ಲ ನನಗೆ ನೀವು ಸಾಕಷ್ಟು ಪ್ರೀತಿಯನ್ನು ನೀಡಿದ್ದೀರಿ. ಇದೀಗ ಇದೇ ಪ್ರೀತಿ ನನ್ನ ಅಭಿಮಾನಿಗಳಿಗೂ ಸಿಗಬೇಕು. ನನ್ನ ಆಪ್ತ ಅಭಿಮಾನಿ ಸತೀಶ್ ಅವರು ನಿಧನರಾಗಿದ್ದು ಆ ಕಾರಣದಿಂದಾಗಿ ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.