ಪ್ರಶಾಂತ್ ನೀಲ್ ಸದ್ಯ ಭಾರತದ ಅತಿ ದೊಡ್ಡ ಸ್ಟಾರ್ ನಿರ್ದೇಶಕ ಎಂದರೆ ತಪ್ಪಾಗದು. ‘ಉಗ್ರಂ’ನಿಂದ ಆರಂಭಿಸಿ, ಇದೀಗ ಕೆಜಿಎಫ್ ಸರಣಿಯಿಂದ ಕನ್ನಡ, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಎಲ್ಲ ಸಿನಿಪ್ರೇಕ್ಷಕರ ಅಭಿಮಾನ ಗಳಿಸಿದ್ದಾರೆ. ಇವರ ಮುಂದಿನ ಚಿತ್ರಗಳು ಯಾವುದು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಈ ಚಿತ್ರಗಳ ಬಗೆಗೆ ಹೊಸದೇ ಕುತೂಹಲಗಳು ಕೆರಳುವಂತೆ ಮಾಡುತ್ತಿದ್ದಾರೆ ಪ್ರಶಾಂತ್.
ಕೆಜಿಎಫ್ ಒಂದು ಸರಣಿ ಚಿತ್ರ. ಎರಡು ಅಧ್ಯಾಯಗಳಲ್ಲಿ, ಎರಡು ಭಾಗಗಳಾಗಿ ಬಿಡುಗಡೆಗೊಂಡು ಎಲ್ಲರ ಮನಸೆಳೆದಿದೆ. ನೀಲ್ ಸದ್ಯ ಪ್ರಭಾಸ್ ಅವರೊಂದಿಗೆ ತಮ್ಮ ಮುಂದಿನ ಚಿತ್ರ ‘ಸಲಾರ್’ನ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬಹುಪಾಲು ಕೆಲಸ ಮುಗಿಸಿದ್ದಾರೆ. ಇದರ ನಂತರ ಜೂನಿಯರ್ ಎನ್ಟಿಆರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಘೋಷಣೆ ಇತ್ತೀಚಿಗಷ್ಟೇ ಆಗಿದ್ದು, ‘ಎನ್ಟಿಆರ್31’ ಎಂಬ ಹೆಸರಿನಿಂದ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಈ ಎರಡೂ ಚಿತ್ರದ ಪೋಸ್ಟರ್ ಗಳನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟರ್ ಜೊತೆಗೆ ಸೇರಿಸಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವುದರ ಜನರ ಕುತೂಹಲವನ್ನ ಕೆರಳಿಸಿದ್ದಾರೆ.
ಈಗಾಗಲೇ ಕೆಜಿಎಫ್ ಚಾಪ್ಟರ್ 3ರ ಬಗ್ಗೆ ಸುಳಿವು ನೀಡಿರೋ ನೀಲ್, ಈ ಎಲ್ಲ ಚಿತ್ರಗಳ ನಡುವೆ ಏನಾದರೂ ಕನೆಕ್ಷನ್ ಇಡಬಹುದಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತಿದೆ. ಅಲ್ಲದೇ ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಇತ್ತೀಚಿಗಿನ ಸುದ್ದಿಗೋಷ್ಟಿಯಲ್ಲಿ “ಮೊದಲು ‘ಸಲಾರ್’ ಚಿತ್ರವನ್ನ ಮುಗಿಸಿಕೊಂಡು ನಂತರ ಕೆಜಿಎಫ್ ಚಾಪ್ಟರ್ 3ನ್ನು ಕೈಗೆತ್ತಿಕೊಳ್ಳಲಿದ್ದೇವೆ. ಕೆಜಿಎಫ್ ಚಾಪ್ಟರ್ 3 ಅನ್ನು ಖಂಡಿತವಾಗಿಯೂ ಮಾಡುತ್ತೇವೆ. ‘ಕೆಜಿಎಫ್’ ಹಾಗು ‘ಸಲಾರ್’ ಚಿತ್ರಗಳನ್ನ ಸೇರಿದಂತೆ ‘ಮಾರ್ವೆಲ್’ ರೀತಿಯ ಸಿನಿಮಾಟಿಕ್ ಯೂನಿವರ್ಸ್ ಒಂದನ್ನು ಮಾಡುವ ಹವಣಿಕೆಯಲ್ಲಿದ್ದೇವೆ ಎಂದಿದ್ದರು. ಹಾಗಾಗಿ ಈ ಮಾತನ್ನು, ಈ ಪೋಸ್ಟರ್ ಗಳನ್ನೂ ಕಂಡ ಅಭಿಮಾನಿಗಳಿಗೆ ಇದೆಲ್ಲ ಒಂದೇ ಕಥಾಹಂದರ ಎಂಬ ಅನುಮಾನ ಆರಂಭವಾಗಿದೆ. ಈ ಎಲ್ಲ ಚಿತ್ರಗಳಲ್ಲಿ ಒಂದೇ ಕಥಾಹಂದರದ, ಒಂದಕ್ಕೊಂದು ಸಂಬಂಧಪಡುವಂತ ಕಥರಗಳಿರಬಹುದು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಎಲ್ಲ ಸಿನಿಮಾಗಳ ಪೋಸ್ಟರ್ ಗಳ ಶೈಲಿಯು ಒಂದೇ ರೀತಿಯಾಗಿದ್ದು, ಎಲ್ಲದರಲ್ಲೂ ಒಂದು ನೀಳ ಕಪ್ಪು ಬಣ್ಣದ ಛಾಯೆಯನ್ನ ನಾವು ಕಾಣಬಹುದು. ಇದರ ನಡುವೆ ಶ್ರೀಮುರುಳಿ ಅಭಿನಯದಲ್ಲಿ ಪ್ರಶಾಂತ್ ನೀಲ್ ಅವರು ಬರೆದ ಕಥೆಯೊಂದು ಕೂಡ ‘ಭಘೀರಾ’ ಎಂಬ ಹೆಸರಿನಲ್ಲಿ ಸಿನಿಮಾವಾಗಿ ಬರುತ್ತಿದ್ದು, ಆ ಚಿತ್ರದ ಪೋಸ್ಟರ್ ಕೂಡ ಇದೇ ಮಾದರಿಯಲ್ಲಿದೆ. ಆದರೆ ಇದನ್ನ ಪ್ರಶಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳದಿರುವುದು ಒಂದು ರೀತಿಯ ಗೊಂದಲವೇ. ಹಾಗಾಗಿ ಈ ಎಲ್ಲ ಚಿತ್ರಗಳ ಸಿನಿಮಾ ಪ್ರಪಂಚಾವೊಂದನ್ನು ನೀಲ್ ಸೃಷ್ಟಿಸಲಿದ್ದಾರೆ ಎಂಬ ಆಸೆ ಅಭಿಮಾನಿಗಳಲ್ಲಿದೆ.
‘ಮಾರ್ವೆಲ್ ಸಿನಿಮಾಟಿಕ್ ಯೂನಿವರ್ಸ್’ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಒಂದು ಕಥಾಪ್ರಪಂಚ. ಇದೇ ರೀತಿಯ ಒಂದು ಸರಣಿ ನಮ್ಮಲ್ಲಿ ಬರಲಿದೆ ಎಂಬ ಯೋಚನೆಯೇ ಸಂತಸ ನೀಡುತ್ತದೆ. ಇನ್ನು ಇದು ಸತ್ಯವಾದರೆ ಅದನ್ನ ಕಣ್ತುಂಬಿಕೊಂಡು ತೃಪ್ತರಾಗಲು ಭಾರತದಾದ್ಯಂತಪ್ರೇಕ್ಷಕರು ಕಾಯುವುದರಲ್ಲಿ ಸಂಶಯವಿಲ್ಲ.