2020ರಲ್ಲಿ ಬಿಡುಗಡೆಯಾದ ಕನ್ನಡದ ಸೂಪರ್ ಹಿಟ್ ಚಿತ್ರ “ದಿಯಾ” ದಲ್ಲಿ ಪೃಥ್ವಿ ಅಂಬರ್, ಖುಷಿ ರವಿ, ದೀಕ್ಷಿತ್ ಶೆಟ್ಟಿ ನಟಿಸಿದ್ದರು. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ದೇಶಾದ್ಯಂತ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಓಟಿಟಿಯಲ್ಲಿ ಯಶಸ್ಸು ಕಂಡಿದ್ದಲ್ಲದೇ ಹಲವು ಭಾಷೆಗಳಿಗೆ ಈ ಚಿತ್ರದ ರಿಮೇಕ್ ರೈಟ್ಸ್ ಖರೀದಿ ಆಯಿತು. ತೆಲುಗು ಹಾಗೂ ಮಲೆಯಾಳಂ ನಲ್ಲಿ ದಿಯಾ ಸಿನಿಮಾದ ಡಬ್ಬಿಂಗ್ ವರ್ಷನ್ ಬಂದವು. 2021ರಲ್ಲಿ ತೆಲುಗಿನಲ್ಲಿ “ಡಿಯರ್ ಮೇಘಾ” ಎಂಬ ಹೆಸರಿನಲ್ಲಿ ರಿಮೇಕ್ ಆಗಿದ್ದು ವೀಕ್ಷಕರ ಮನ ಸೆಳೆದಿತ್ತು.
ಕನ್ನಡದಲ್ಲಿ ದಿಯಾ ಸಿನಿಮಾ ನಿರ್ದೇಶಿಸಿದ್ದ ಕೆ. ಎಸ್ ಅಶೋಕ ಅವರು ಇದೀಗ ಹಿಂದಿ ರಿಮೇಕ್ ನ್ನು ನಿರ್ದೇಶನ ಮಾಡುತ್ತಿದ್ದಾರೆ. “ಡಿಯರ್ ದಿಯಾ” ಎಂಬ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ತ್ರಿಕೋನ ಪ್ರೇಮಕಥೆಯಲ್ಲಿ ಉಳಿದ ಎರಡು ಪ್ರಮುಖ ಪಾತ್ರಗಳಲ್ಲಿ ಹೊಸಬರು ಕಾಣಿಸಿಕೊಂಡಿದ್ದಾರೆ. ಪೃಥ್ವಿ ಅಂಬರ್ “ಡಿಯರ್ ದಿಯಾ” ಚಿತ್ರದ ಫಸ್ಟ್ ಲುಕ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
“ಡಿಯರ್ ದಿಯಾ ಚಿತ್ರದ ಪೋಸ್ಟರ್ ನ್ನು ಬಹಿರಂಗ ಪಡಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸದ್ಯದಲ್ಲಿಯೇ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಇದು ದಿಯಾ ಸಿನಿಮಾದ ಹಿಂದಿ ರಿಮೇಕ್ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಡಿಯರ್ ದಿಯಾ ಚಿತ್ರದಲ್ಲಿ ಮಿಹಿಕಾ ಖುಷ್ವಹಾ ಹಾಗೂ ಉಜ್ವಲ್ ಶರ್ಮಾ ಕಾಣಿಸಿಕೊಂಡಿದ್ದು ಕಮ್ಲೇಶ್ ಸಿಂಗ್ ಖುಷ್ವಹಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.