‘ಕೆಜಿಎಫ್’ ಎನ್ನೋ ಹೊಸ ಪ್ರಪಂಚವನ್ನೇ ಸೃಷ್ಟಿಸಿ ನಮ್ಮ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದು, ಸ್ಟಾರ್ ನಿರ್ದೇಶಕ ಎನಿಸಿಕೊಂಡವರು ಪ್ರಶಾಂತ್ ನೀಲ್. ತಮ್ಮ ವಿಭಿನ್ನ ರೀತಿಯ ನಿರ್ದೇಶನದಿಂದ ಎಲ್ಲರ ಮನಸೆಳೆದಿರೋ ಇವರ ಮುಂದಿನ ಸಿನಿಮಾ ‘ಸಲಾರ್’. ಪ್ರಭಾಸ್ ಅವರು ನಾಯಕನಾಗಿ ನಟಿಸುತ್ತಿರುವ ಈ ಪಾನ್-ಇಂಡಿಯನ್ ಸಿನಿಮಾ ಸದ್ಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾದ ಬಗ್ಗೆ ಮಲಯಾಳಂ ನ ಹೆಸರಾಂತ ಸ್ಟಾರ್ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮಾತನಾಡಿದ್ದಾರೆ.
ಈ ಹಿಂದೆ ‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಬಗ್ಗೆ ಯಾರು ಕೂಡ ಅಧಿಕೃತವಾಗಿ ಮಾತನಾಡಿರಲಿಲ್ಲ. ಸದ್ಯ ಈ ಬಗ್ಗೆ ಪೃಥ್ವಿರಾಜ್ ವಿಶ್ಲೇಷಿಸಿದ್ದಾರೆ. “ಪ್ರಶಾಂತ್ ನೀಲ್ ನನಗೆ ‘ಸಲಾರ್’ ಸಿನಿಮಾದ ಕಥೆಯನ್ನ ಸುಮಾರು ಎರಡು ವರ್ಷಗಳ ಹಿಂದೆಯೇ ಹೇಳಿದ್ದರು. ಅದೊಂದು ಅದ್ಭುತ ಕಥೆ. ನಾನು ಸಿನಿಮಾದಲ್ಲಿ ನಟಿಸಲಿರುವುದು ಖಚಿತ. ಆದರೆ ಡೇಟ್ ಗಳ ಹೊಂದಾಣಿಕೆ ಕಾರ್ಯ ನಡೆಯುತ್ತಿದೆ. ಅದನ್ನ ನಾನು ಪ್ರಶಾಂತ್ ನೋಡಿಕೊಂಡು ಕೆಲಸ ಮಾಡುತ್ತೇವೆ. ‘ಸಲಾರ್’ ಒಂದೊಳ್ಳೆ ಸ್ಕ್ರಿಪ್ಟ್. ಎಲ್ಲ ಅಂದುಕೊಂಡಂತೆ ಆದರೆ, ಇನ್ಮುಂದೆ ಹಲವು ತೆಲುಗು ಸಿನಿಮಾಗಳಲ್ಲಿ ನಾನು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಲವು ಅತ್ಯುತ್ತಮ ಸಿನಿಮಾ ನಿರ್ಮಾಪಕರು ಒಳ್ಳೊಳ್ಳೆ ಕಥೆಗಳನ್ನು ತಂದು ನೀಡುತ್ತಿದ್ದಾರೆ ” ಎಂದಿದ್ದಾರೆ ಪೃಥ್ವಿರಾಜ್.
‘ಸಲಾರ್’ ಸಿನಿಮಾದಲ್ಲಿ ಪೃಥ್ವಿರಾಜ್ ಅವರ ಜೊತೆ ಶೃತಿ ಹಾಸನ್, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ‘ಹೊಂಬಾಳೆ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ರೆಡಿ ಆಗುತ್ತಿದೆ. ಈಗಾಗಲೇ ‘ಹೊಂಬಾಳೆ’ಯೊಂದಿಗೆ ‘ಟೈಸನ್’ ಸಿನಿಮಾದ ಮೂಲಕ ನಟ ಹಾಗು ನಿರ್ದೇಶಕನಾಗಿ ಕೈ ಜೋಡಿಸುತ್ತಿರೋ ಪೃಥ್ವಿರಾಜ್ ಸುಕುಮಾರನ್, ‘ಸಲಾರ್’ ಮೂಲಕ ನಟನಾಗಿ ‘ಹೊಂಬಾಳೆ ಫಿಲಂಸ್’ ಅಂಕಣ ತಲುಪಲಿದ್ದಾರೆ. ಸದ್ಯ ಅರ್ಧದಷ್ಟು ಚಿತ್ರೀಕರಣ ಮುಗಿಸಿಕೊಂಡಿರೋ ಚಿತ್ರತಂಡ 2023ಕ್ಕೆ ಸಿನಿಮಾ ಬಿಡುಗಡೆ ಮಾಡೋ ತಯಾರಿಯಲ್ಲಿದೆ