ಬಾಲಕಲಾವಿದೆಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸಾನ್ಯಾ ಅಯ್ಯರ್ ಕನ್ನಡಿಗರ, ಕರ್ನಾಟಕದ ಮನೆ ಮಗಳು ಎಂದರೆ ತಪ್ಪಾಗಲಾರದು. ಸಾನ್ಯಾ ಅಯ್ಯರ್? ಅದ್ಯಾರು ಎಂದು ಯೋಚಿಸುತ್ತಿದ್ದೀರಾ? ನಿಮಗೆ ಹಾಗೆ ಯೋಚನೆ ಬಂದರೆ ಆಶ್ಚರ್ಯವೇ ಇಲ್ಲ! ಯಾಕೆಂದರೆ ಸಾನ್ಯಾ ಅಯ್ಯರ್ ಎನ್ನುವುದು ಆಕೆಯ ರಿಯಲ್ ಹೆಸರು. ಅಂದ ಹಾಗೇ ಸಾನ್ಯಾ ಅಯ್ಯರ್ ರೀಲ್ ಹೆಸರು ಪುಟ್ಟ ಗೌರಿ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿ ನಾಯಕಿ ಪುಟ್ಟ ಗೌರಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಸಾನ್ಯಾ ಅಯ್ಯರ್ ಅವರ ಮುದ್ದಾದ ಅಭಿನಯಕ್ಕೆ ಮನಸೋಲದವರಿಲ್ಲ! ಇಂದಿಗೂ ಪುಟ್ಟ ಗೌರಿ ಮದುವೆ ಎಂದಾಗ ತತ್ ಕ್ಷಣ ನೆನಪಾಗುವ ಮುಖ ಸಾನ್ಯಾ ಅವರದ್ದು. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನ ಸೆಳೆದಿತ್ತು.
ಪುಟ್ಟ ಗೌರಿ ಮದುವೆ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸಾನ್ಯಾ ಇದೀಗ ಲಾಂಗ್ ಬ್ರೇಕ್ ನ ನಂತರ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ಆಕೆ ಮರಳಿರುವುದು ನಟಿಯಾಗಿ ಅಲ್ಲ, ಬದಲಿಗೆ ಡ್ಯಾನ್ಸರ್ ಆಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಜ್ಯೂನಿಯರ್ಸ್ ನ ಸ್ಪರ್ಧಿಯಾಗಿ ಕಿರುತೆರೆಗೆ ಮರಳಿರುವ ಸಾನ್ಯಾ ಇದೀಗ ಡ್ಯಾನ್ಸ್ ಮೂಲಕವೂ ವೀಕ್ಷಕರನ್ನು ರಂಜಿಸುತ್ತಿದ್ದಾರೆ.
ಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಾನ್ಯಾ ಅಯ್ಯರ್ ಸಿಂಧೂರ, ಕುಸುಮಾಂಜಲಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಶ್ರುತಿ ನಾಯ್ಡು ಅವರ ಸಿಂಧೂರ ಧಾರಾವಾಹಿಯಲ್ಲಿ ಸಿಂಧೂ ಆಗಿ ನಟಿಸಿದ್ದ ಸಾನ್ಯಾ ಖಳನಾಯಕಿಯಾಗಿಯೂ ಕಿರುತೆರೆಯಲ್ಲಿ ಫೇಮಸ್ಸು!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ರಶ್ಮಿ ಎನ್ನುವ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆಯನ್ನು ಜನ ಒಪ್ಪಿಕೊಂಡದ್ದು ಪುಟ್ಟಗೌರಿಯಾಗಿ ಬದಲಾದ ಬಳಿಕವೇ! ಪುಟ್ಟ ಗೌರಿ ಮದುವೆ ಮುಗಿದು ವರ್ಷಗಳಾದರೂ ಜನ ಇನ್ನು ಕೂಡಾ ಆಕೆಯನ್ನು ನೆನಪಿನಲ್ಲಿಟ್ಟುಕೊಂಡಿರುವುದು ಅದಕ್ಕೆ ಪ್ರಸಕ್ತ ಉದಾಹರಣೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಮಿಂಚಿರುವ ಆಕೆ ಗಜ, ಅನು, ಬೆಳಕಿನೆಡೆಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ಸಿನಿಮಾದಲ್ಲಿಯೂ ನಟಿಸಿರುವ ಸಾನ್ಯಾ ಆ ಸಿನಿಮಾದ ನಟನೆಗೆ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಕೂಡಾ ಪಡೆದಿದ್ದಾರೆ. ಇನ್ನು ಮಲಯಾಳಂ ನ ಆರಾರೊ ನೀಯಾರೊ ಎನ್ನುವ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಪರಭಾಷೆಯಲ್ಲೂ ಕಮಾಲ್ ಮಾಡಿದ್ದಾರೆ.