ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಲಿಯಾಸ್ ರಾಧಾ ಮಿಸ್ ಆಗಿ ಅಭಿನಯಿಸಿದ್ದ ಶ್ವೇತಾ ಪ್ರಸಾದ್ ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ನಟನೆಯಿಂದ ಕೊಂಚ ದೂರವಿದ್ದ ರಾಧಾ ಮಿಸ್ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕತ್ ಆ್ಯಕ್ಟೀವ್. ಸದಾ ಕಾಲ ಹೊಸ ಹೊಸ ಪೋಸ್ಟ್ ಗಳ ಮೂಲಕ ನೆಟ್ಟಿಗರ ಮನ ಸೆಳೆಯುತ್ತಿರುತ್ತಾರೆ ಶ್ವೇತಾ ಪ್ರಸಾದ್.
ಇನ್ನು ಹೆಚ್ಚಾಗಿ ಫೋಟೋಶೂಟ್ ಗಳ ಮೂಲಕವೂ ಸದ್ದು ಮಾಡುತ್ತಿರುವ ಶ್ವೇತಾ ಪ್ರಸಾದ್ ಅಪರೂಪಕ್ಕೊಮ್ಮೆ ತಮ್ಮ ಹಾಟ್ ಅವತಾರದ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದಿದ್ದೂ ಇದೆ. ಇಂತಿಪ್ಪ ಚೆಲುವೆಗೆ ನೀವ್ಯಾಗ ಮಕ್ಕಳನ್ನು ಮಾಡಿಕೊಳ್ಳುತ್ತೀರಿ? ಮದುವೆಯಾಗಿ ವರ್ಷ ಕಳೆದರೂ ಇನ್ನು ಕೂಡಾ ಮಕ್ಕಳಾಗಿಲ್ಲ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಕೇಳುತ್ತಿದ್ದರು.
ಪ್ರತಿಸಲವೂ ಇಂತಹ ಪ್ರಶ್ನೆ ಬಂದಾಗ ಗಪ್ ಚುಪ್ ಆಗಿದ್ದ ಶ್ವೇತಾ ಇದೀಗ ಪೋಸ್ಟ್ ಹಾಕುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. “ಇನ್ನು ಕೂಡಾ ನನಗೆ ಮಗುವಾಗಿಲ್ಲ. ಅದಕ್ಕೆ ಕಾರಣವೇನು ಎಂಬುದು ನಿಮ್ಮ ಪ್ರಶ್ನೆ. ಆದರೆ ಇದು ನನ್ನ ವೈಯಕ್ತಿಕ ವಿಚಾರ. ಇದರಲ್ಲಿ ನಿಮಗೆ ಯಾವುದೇ ರೀತಿಯ ಸಂಬಂಧವಿಲ್ಲ. ಮಗು ಪಡೆಯುವುದು, ಮಗುವಿಗೆ ಜನ್ಮ ನೀಡುವುದು ಮಹಿಳೆಯ ಆಯ್ಕೆ. ಯಾವಾಗ ಎಲ್ಲಿ, ಹೇಗೆ ಎನ್ನುವುದನ್ನು ಅವಳಿಗೆ ಬಿಟ್ಟುಬಿಡಿ. ಓದು, ನಂತರ ಮದುವೆ, ಮುಂದೆ ಮಗು, ಕೊನೆಗೆ ಸಾವು ಹೀಗೆ ಅಂತ ಏನು ಸೂತ್ರವಿಲ್ಲ’ ಎಂದಿದ್ದಾರೆ.
ಇದರ ಜೊತೆಗೆ ಈಗಾಗಲೇ ಮಕ್ಕಳಿರುವ ಬಗ್ಗೆ ಮಾತನಾಡಿರುವ ಶ್ವೇತಾ “ಕುಟುಂಬದವರ ಒತ್ತಡದಿಂದ, ಸಮಾಜ ಕೇಳುತ್ತಿದೆ ಎಂದು, ಅಮ್ಮ ಹೇಳಿದರು ಎನ್ನುವ ಕಾರಣಕ್ಕೆ ಮಗುವನ್ನು ಮಾಡಿಕೊಳ್ಳುತ್ತಾರೆ. ಆದರೆ
ಒಬ್ಬ ಮಹಿಳೆ ಮಗು ಮಾಡಿಕೊಳ್ಳಲು ನಿರ್ಧರಿಸುವ ಪಯಣ ತುಂಬಾ ಪ್ರಮುಖವಾದುದು. ಮಗುವನ್ನು ಪಡೆಯಲು ಅವಳೇ ನಿರ್ಧಾರ ಪಡೆಯಬೇಕು. ಅದನ್ನು ನೀವು ಅಲ್ಲ, ಬೇರೆ ಯಾರೂ ಕೂಡಾ ನಿರ್ಧರಿಸಬಾರದು. ಮುಖ್ಯವಾಗಿ ಅವಳ ನಿರ್ಧಾರವನ್ನು ಪ್ರಶ್ನೆ ಮಾಡದಿರಿ. ಇದನ್ನು ಪ್ರಶ್ನೆ ಮಾಡಲು ಯಾರಿಗೂ ಅಧಿಕಾರವಿಲ್ಲ’ ಎಂದು ಖಡಕ್ ಆಗಿ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ ಶ್ವೇತಾ.