ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆಶ್ಯಾಮ ಧಾರಾವಾಹಿಯಲ್ಲಿ ನಾಯಕಿ ರಾಧೆ ಆಗಿ ನಟಿಸುತ್ತಿರುವ ತನ್ವಿ ರಾವ್ ಅವರ ನಟನಾ ಯಾನ ಶುರುವಾಗಿದ್ದು ಹಿರಿತೆರೆಯಿಂದ. ಬಾಲಿವುಡ್ ಮೂಲಕ ಬಣ್ಣದ ಲೋಕದ ನಟು ಬೆಳೆಸಿಕೊಂಡ ತನ್ವಿ ರಾವ್ ಇದೀಗ ರಾಧೆಯಾಗಿ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಮಾಧುರಿ ದೀಕ್ಷಿತ್ ನಟಿಸಿರುವ ಗುಲಾಬಿ ಗ್ಯಾಂಗ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ನಟನಾ ಬದುಕಿಗೆ ಪಾದಾರ್ಪಣೆ ಮಾಡಿದ ತನ್ವಿ ರಾವ್ ಮೊದಲ ಬಾರಿಗೆ ಬಣ್ಣ ಹಚ್ಚಿದಾಗ ವಯಸ್ಸು ಕೇವಲ ಹದಿನೈದು ವರ್ಷ.
“ಗನ್ಸ್ ಆಫ್ ಬನಾರಸ್ ” ಎಂಬ ಬಾಲಿವುಡ್ ಸಿನಿಮಾದಲ್ಲಿ ಬಣ್ಣ ಹಚ್ಚಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದ ತನ್ವಿ ರಾವ್ ರಂಗ್ ಬಿರಂಗಿ ಸಿನಿಮಾದ ಮುಖಾಂತರ ಚಂದನವನಕ್ಕೆ ಕಾಲಿಟ್ಟ ಚೆಲುವೆ. ಉದಯ ವಾಹಿನಿಯಲ್ಲಿ ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ ಆಕೃತಿಯಲ್ಲಿ ನಾಯಕಿಯಾಗಿ ನಟಿಸಿದ್ದ ತನ್ವಿ ಇದೀಗ ರಾಧೆಯಾಗಿ ಕಿರುತೆರೆಯಲ್ಲಿ ಮೂಲಕ ಮನೆ ಮಾತಾಗಿರುವ ಈಕೆ
ನೃತ್ಯಗಾರ್ತಿಯೂ ಹೌದು.
ಚಿಕ್ಕ ವಯಸ್ಸಿನಿಂದಲೂ ನೃತ್ಯದತ್ತ ಒಲವು ಹೊಂದಿದ್ದ ತನ್ವಿ ಮೊದಲು ನೃತ್ಯ ಮಾಡಿದ್ದು ನಾಲ್ಕನೇ ವಯಸ್ಸಿನಲ್ಲಿ. ಭರತನಾಟ್ಯ ಕಲೆಯನ್ನು ಕಲಿತಿರುವ ತನ್ವಿ ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಾಕೆ. ಒಂದಿಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈಕೆ ಭರತನಾಟ್ಯದ ಜೊತೆಗೆ ಕಥಕ್, ಸೆಮಿ ಕ್ಲಾಸಿಕಲ್ ನೃತ್ಯದಲ್ಲಿಯೂ ಪ್ರವೀಣೆ. ಯುರೋಪ್ ಮತ್ತು ಏಷ್ಯಾದ ಆರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹೆಜ್ಜೆ ಹಾಕಿರುವ ತನ್ವಿ ಕಿರುತೆರೆಗೆ ಕಾಲಿಡಲು ಕೂಡಾ ನೃತ್ಯವೇ ಕಾರಣ.
ನೃತ್ಯಗಾರ್ತಿಯಾಗಿದ್ದ ಕಾರಣದಿಂದಲೇ ಆಕೃತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದ ತನ್ವಿ ನಟನೆಯ ಮೂಲಕ ವೀಕ್ಷಕರಿಗೆ ಮಜರಂಜನೆ ನೀಡುವಲ್ಲಿ ಸಫಲರಾದರು. ಇದೀಗ ರಾಧೆಯಾಗಿ ನಟಿಸುತ್ತಿರುವ ತನ್ವಿ ಮುಂದಿನ ದಿನಗಳಲ್ಲಿ ಮತ್ತೆ ಚಂದನವನದಲ್ಲಿ ಮೋಡಿ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.