‘777 ಚಾರ್ಲಿ’ ಸಿನಿಮಾದ ಬಗೆಗೆ ಯಾರಿಗೆ ತಾನೇ ಗೊತ್ತಿಲ್ಲ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಇದೇ ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆ ಕಾಣುತ್ತಿದೆ. ಎಲ್ಲೆಡೆ, ಎಲ್ಲ ಭಾಷೆಗಳಲ್ಲೂ ಮುಗಿಲೆತ್ತರದ ನಿರೀಕ್ಷೆಗಳನ್ನು ಪಡೆದಿದೆ ಈ ಸಿನಿಮಾ. ಚೆನ್ನೈ ನಲ್ಲಿ ‘ಚಾರ್ಲಿ’ಯದೇ ಕಟ್-ಔಟ್ ಕೂಡ ತಲೆ ಎತ್ತಿ ನಿಂತಿದೆ. ಈಗಾಗಲೇ ಹಲವಾರು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ಆಯೋಜಿಸಿದ್ದ ಪ್ರೀಮಿಯರ್ ಶೋಗಳು ಪ್ರೇಕ್ಷಕರಿಗೆ ನಿಗದಿತ ಸಿನಿಮಾ ಬಿಡುಗಡೆ ದಿನಾಂಕಕ್ಕೂ ಮುನ್ನವೇ ‘ಧರ್ಮ ಹಾಗು ಚಾರ್ಲಿ’ಯ ಜೀವಗಾಥೆಯನ್ನು ಕಣ್ತುಂಬಿಕೊಳ್ಳಲು ಸಹಕಾರ ನೀಡಿವೆ. ಭಾರತದ ವಿವಿಧೆಡೆ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶಿತವಾಗುತ್ತಿರೋ ಪ್ರೀಮಿಯರ್ ಶೋಗಳು ಎಲ್ಲೆಡೆ ಸಿನಿರಸಿಕರ ಮನಸೆಳೆಯುತ್ತಿದೆ.
ಮನುಷ್ಯ ಹಾಗು ನಾಯಿಯ ನಡುವಿನ ಅವಿನಾಭಾವ ಸಂಭಂದವನ್ನು ಸಾರಿ ಹೇಳುವ ಸಿನಿಮಾ ‘777 ಚಾರ್ಲಿ’. ದೆಹಲಿ, ಕೊಲ್ಕತ್ತಾ, ಲಕ್ನೋ, ಅಹ್ಮದಾಬಾದ್ ಮುಂತಾದ ಭಾಗಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿತ್ತು. ಅದರ ಜೊತೆಗೆ ಹಲವು ಸೆಲೆಬ್ರಿಟಿ ಪ್ರೀಮಿಯರ್ ಶೋಗಳನ್ನು ಕೂಡ ಚಿತ್ರತಂಡ ಆಯೋಜಿಸಿತ್ತು. ಇವುಗಳನ್ನು ಕಂಡ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಚಿತ್ರತಂಡದವರನ್ನು ಸಂತುಷ್ಟಾರಾಗಿಸಿದೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕ ಹಾಗು ನಾಯಕ ನಟ ರಕ್ಷಿತ್ ಶೆಟ್ಟಿ,”ಈಗಾಗಲೇ ಆಯೋಜಿಸಲಾದ ಪ್ರೀಮಿಯರ್ ಶೋಗಳನ್ನು ಕಂಡ ಹಲವಾರು ಜನರು ಚಿತ್ರದ ಬಗೆಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಕೆಲವರಂತೂ ಕಣ್ತುಂಬಿಸಿಕೊಂಡು ಚಿತ್ರಮಂದಿರದಿಂದ ಹೊರಗೆ ಬರುತ್ತಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತಿವೆ. ವ್ಯಾಪಾರದ ದೃಷ್ಟಿಯಲ್ಲಿ ಹೇಳುವುದಾದರೆ “ಬಿಡುಗಡೆಗೂ ಮುನ್ನವೇ ಚಾರ್ಲಿ ನಮ್ಮನ್ನು ಗೆಲ್ಲಿಸಿದ್ದಾಳೆ” ಎನ್ನುತ್ತಾರೆ.
ಚಾರ್ಲಿ ಸಿನಿಮಾವನ್ನು ಕಣ್ತುಂಬಿಕೊಂಡ ನಮ್ಮ ಕನ್ನಡದ ಸೆಲೆಬ್ರಿಟಿಗಳಾದ ಮೋಹಕತಾರೆ ರಮ್ಯಾ, ‘ರಾಜಕುಮಾರ’ ಖ್ಯಾತಿಯ ಸಂತೋಷ್ ಆನಂದ್ ರಾಮ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ದಂಪತಿ ಮುಂತಾದವರು ಸಿನಿಮಾ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಚಿತ್ರ ನನ್ನ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ” ಎಂದು ರಮ್ಯಾ ಭಾವುಕರಾದರೆ, “ಈ ರೀತಿಯ ಪಾತ್ರ, ಹಾಗು ಈ ರೀತಿಯ ಸಿನಿಮಾ ಮಾಡಲು ಅಪಾರ ತಾಳ್ಮೆ ಹಾಗು ಉತ್ತಮ ವ್ಯಕ್ತಿತ್ವ ಬೇಕು. ರಕ್ಷಿತ್ ಹಾಗು ಕಿರಣ್ ರಾಜ್ ಅವರು ಸದೃಢ ವ್ಯಕ್ತಿತ್ವದವರು ಎಂಬುದು ಈ ಮೂಲಕ ತಿಳಿಯುತ್ತದೆ” ಎನ್ನುತ್ತಾರೆ ಸಂತೋಷ್ ಆನಂದ್ ರಾಮ್.
ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರೀಮಿಯರ್ ಶೋ ಪಡೆಯಲಿದೆ. ಜೂನ್ 9ರಂದು ಕರ್ನಾಟಕ ರಾಜ್ಯದಾದ್ಯಂತ ಸುಮಾರು 100 ಪ್ರೀಮಿಯರ್ ಶೋಗಳನ್ನು ಚಿತ್ರ ಕಾಣಲಿದೆ. ಬೆಂಗಳೂರಿನಲ್ಲೇ ಸುಮಾರು 55ಕ್ಕೂ ಹೆಚ್ಚು ಕಡೆಗಳಲ್ಲಿ ಶೋ ಏರ್ಪಾಡಾಗಿದೆ. ಈ ಪ್ರದರ್ಶನಗಳ ಟಿಕೆಟ್ ಗಳು ಕೂಡ ಅಷ್ಟೇ ರಭಸದಿಂದ ಮಾರಾಟವಾಗುತ್ತಿವೆ. ಹಾಗಾಗಿ ಪ್ರೀಮಿಯರ್ ಶೋಗಳಿಂದಲೇ ಸಿನಿಮಾ ಲಾಭ ಪಡೆಯುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.