ರಕ್ಷಿತ್ ಶೆಟ್ಟಿಯವರ ಸಿನಿದಾರಿಯಲ್ಲಿ ಸದ್ಯ ಹಲವಾರು ಸಿನಿಮಾಗಳಿವೆ. ಜನರೆದುರಿಗೆ ತಂದಿಟ್ಟ ಚಿತ್ರಗಳು ಒಂದಷ್ಟಾದರೆ, ಇನ್ನು ಪೇಪರ್ ಮೇಲೆ ಇರುವ ಚಿತ್ರಗಳೇ ಎಷ್ಟಿವೆಯೋ! ಸದ್ಯ ಅವರ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು. ಇದೇ ಜೂನ್ 10ರಂದು ಪ್ರಪಂಚದಾದ್ಯಂತ ತೆರೆಕಾಣುತ್ತಿದೆ. ಇದೀಗ ರಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರ ಅಭಿಮಾನಿಗಳಿಗೆ ಹೊಸ ಸಂತಸ ನೀಡಲು ಸಿದ್ಧವಾಗಿದೆ.
‘777 ಚಾರ್ಲಿ’ಯ ನಂತರ ರಕ್ಷಿತ್ ಶೆಟ್ಟಿ ನಟಿಸುತ್ತಿರುವುದು, ಹೇಮಂತ್ ಎಂ ರಾವ್ ಅವರ ಸೃಷ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ. ಚಾರ್ಲಿ ಜೊತೆಗಿನ ‘ಧರ್ಮ’ನಾಗಿದ್ದ ಶೆಟ್ರು ಸದ್ಯ ಸಪ್ತ ಸಾಗರ ದಾಟಿದ ‘ಮನು’ ಆಗಿ ಬದಲಾಗಿದ್ದಾರೆ. ಈ ಪಾತ್ರಕ್ಕಾಗಿ ತಮ್ಮಲ್ಲಿ ಹಲವು ಬದಲಾವಣೆಗಳನ್ನು ಸಹ ಮಾಡಿಕೊಂಡಿದ್ದಾರೆ ರಕ್ಷಿತ್. ಇದೀಗ ಚಿತ್ರದ ಮೊದಲ ನೋಟವನ್ನು ಜನರ ಎದುರಿಗೆ ಇಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ರಕ್ಷಿತ್ ‘ಮನು’ ಎಂಬ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈ ಪಾತ್ರದಲ್ಲಿ ರಕ್ಷಿತ್ ಹೇಗೆ ಕಾಣಲಿದ್ದಾರೆ ಎಂಬ ಮುನ್ನೋಟವನ್ನು ಜನರ ಎದುರು ಇಡಲಿದ್ದಾರೆ. ಇದೇ 23ರ ಸೋಮವಾರ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಬಗ್ಗೆ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದ್ದು, ಪೋಸ್ಟರ್ ನಲ್ಲಿ “10 Years later, A Monday morning” ಎಂದು ಬರೆದುಕೊಂಡಿದ್ದಾರೆ. ಇದು ಚಿತ್ರದ ಬಗೆಗಿನ ಯಾವುದಾದರೂ ಸುಳಿವಿರಬಹುದಾ ಎಂದು ಎದುರುನೋಡುತ್ತಿದ್ದಾರೆ ಅಭಿಮಾನಿಗಳು.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನ ಹೇಮಂತ್ ಎಂ ರಾವ್ ಅವರು ಸೃಷ್ಟಿಸಿ ನಿರ್ದೇಶಸುತ್ತಿದ್ದೂ, ರಕ್ಷಿತ್ ಶೆಟ್ಟಿಯವರ ‘ಪರಮ್ವಾಹ್ ಸ್ಟುಡಿಯೋಸ್’ ಸಂಸ್ಥೆ ಸಿನಿಮಾವನ್ನ ನಿರ್ಮಾಣ ಮಾಡಲಿದ್ದಾರೆ. ಚರಣ್ ರಾಜ್ ಅವರ ಸಂಗೀತ ಚಿತ್ರದಲ್ಲಿರಲಿದೆ. ಈ ಮೂವರ ಹಿಂದಿನ ಚಿತ್ರವಾದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಪ್ರಪಂಚದಾದ್ಯಂತ ಸದ್ದು ಮಾಡಿದ್ದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚೇ ಇವೆ. ನಾಯಕ ರಕ್ಷಿತ್ ಶೆಟ್ಟಿ ಅವರಿಗೆ ಂ. ‘ಬೀರಬಲ್’ ಬೆಡಗಿ ರುಕ್ಮಿಣಿ ವಸಂತ್ ನಟಿಸಲಿದ್ದಾರೆ. ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದುನೋಡಬೇಕಿದೆ.