ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಹೊಸ ಅಲೆಯ ಸಂಸ್ಥಾಪಕ ಎಂದರೆ ತಪ್ಪಾಗದು. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಕನ್ನಡಿಗರಿಗೆ ನಟನಾಗಿಯೂ, ನಿರ್ದೇಶಕನಾಗಿಯೂ ನೀಡುತ್ತಾ ತನಗಿದ್ದ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ ರಕ್ಷಿತ್. ನಿನ್ನೆಯಷ್ಟೇ(ಜೂನ್ 6) ತಮ್ಮ ಜನುಮದಿನವನ್ನು ಆಚರಿಸಿಕೊಂಡ ಇವರು, ತಮ್ಮ ಹೊಸ ಸಿನಿಮಾದ ಟೀಸರ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಹೇಮಂತ್ ಎಂ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಟೀಸರ್ ಜೂನ್ 6ರ ಸಂಜೆ 6ಗಂಟೆಗೆ ಬಿಡುಗಡೆಯಾಗಿದೆ.
ರಕ್ಷಿತ್ ಶೆಟ್ಟಿ ಹಾಗು ರುಕ್ಮಿಣಿ ವಸಂತ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನ ಎಂದೋ ಹುಟ್ಟುಹಾಕಿತ್ತು. ಇದೀಗ ಬಿಡುಗಡೆಯಾದ ಟೀಸರ್ ಈ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ದೂರದಲ್ಲೆಲ್ಲೋ ಇರುವ ‘ಮನು’ಗೆ ತನ್ನ ಮನಸಿನ ಭಾವನೆಗಳನ್ನ ಹೇಳಿಕೊಳ್ಳುವ ‘ಪ್ರಿಯಾ’ಳ ಮುಗ್ಧ ಮಾತುಗಳನ್ನ ಈ ಟೀಸರ್ ತುಂಬಿಕೊಂಡಿದ್ದು, ಪ್ರೇಕ್ಷಕರೆಲ್ಲರ ಮನಸನ್ನೂ ಹಗುರವಾಗಿಸೋ ಭಾವನೆ ತುಂಬಿದೆ. ಒಂದು ಮಧುರ ಪ್ರೇಮಕಥೆಯನ್ನೊಳಗೊಂಡ ಥ್ರಿಲರ್ ಕಥೆ ಇದಾಗಿರಲಿದೆ ಎಂಬ ಎಲ್ಲ ರೀತಿಯ ಸುಳಿವು ಸಹ ಚಿತ್ರದ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ. ಚರಣ್ ರಾಜ್ ಅವರ ಸಂಗೀತವಿರುವ ಈ ಚಿತ್ರದಲ್ಲಿ ನಾಯಕ ನಾಯಕಿಯ ಜೊತೆಗೆ ಅವಿನಾಶ್, ಶರತ್ ಲೋಹಿತಾಶ್ವ, ಗೋಪಾಲ್ ಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸ್ವತಃ ರಕ್ಷಿತ್ ಶೆಟ್ಟಿ ಅವರು ತಮ್ಮ ‘ಪರಮ್ ವಾಹ್ ಸ್ಟುಡಿಯೋಸ್’ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಅರ್ಧ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಆದಷ್ಟು ಬೇಗ ತೆರೆಮೇಲೆ ಬರುವ ಸಾಧ್ಯತೆಯಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎಂಬ ಪಾತ್ರದಲ್ಲಿ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
• ‘ಐಎಂಡಿಬಿ’ಯಲ್ಲಿ ಹತ್ತಕ್ಕೆ ಹತ್ತು ಅಂಕ!!
ಬಿಡುಗಡೆಯ ದಿನಾಂಕ ಕೂಡ ಖಾತ್ರಿಮಾಡಿಕೊಳ್ಳದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ‘ಐಎಂಡಿಬಿ’ ಸಿನಿಮಾ ಪರದೆಯಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದಿದೆ. ನಿರ್ದೇಶಕ ಹೇಮಂತ್ ರಾವ್ ಹಾಗು ನಟ ರಕ್ಷಿತ್ ಶೆಟ್ಟಿ ಅವರು ಮೂಡಿಸಿರುವ ಭರವಸೆಯನ್ನು ಈ ರೇಟಿಂಗ್ ಎತ್ತಿ ಹಿಡಿಯುತ್ತಿದೆ ಎನ್ನಬಹುದು. ಸದ್ಯ ‘777 ಚಾರ್ಲಿ’ ಸಿನಿಮಾದ ಬಿಡುಗಡೆಯ ಭರದಲ್ಲಿರುವ ರಕ್ಷಿತ್ ಶೆಟ್ಟಿ, ಆದಷ್ಟಿ ಬೇಗ ‘ಸಪ್ತ ಸಾಗರದಾಚೆ ಎಲ್ಲೋ’ ತಂಡವನ್ನು ಮತ್ತೆ ಸೇರುವ ಸಾಧ್ಯತೆಗಳಿವೆ.