ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “777 ಚಾರ್ಲಿ” ಇನ್ನು ಎರಡೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್ ರಾಜ್ ಕೆ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮನ ಸೆಳೆದಿತ್ತು.
ಟೀಸರ್ ನೋಡಿ ಫಿದಾ ಆದ ಸಿನಿಪ್ರಿಯರು ಯಾವಾಗ ಚಿತ್ರ ರಿಲೀಸ್ ಆಗಲಿದೆ ಎಂದು ಕಾಯುತ್ತಿದ್ದಾರೆ. ಇನ್ನು ಚಿತ್ರ ಬಿಡುಗಡೆಯಾಗುವ ಮೊದಲೇ ಪ್ರೀಮಿಯರ್ ಶೋ ನಡೆದಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ 777 ಚಾರ್ಲಿ ಸಿನಿಮಾ ನೋಡಿದ್ದು ಈ ಕಥಾಹಂದರಕ್ಕೆ ಸಂಪೂರ್ಣ ಫಿದಾ ಆಗಿದ್ದಾರೆ. ಪ್ರಾಣಿ ಪ್ರಿಯೆ ಅದರಲ್ಲೂ ಶ್ವಾನ ಪ್ರಿಯೆ ಆಗಿರುವ ರಮ್ಯಾ ಅವರು ಈ ಸಿನಿಮಾದ ನೋಡಿ ಮನ ಸೋತಿದ್ದಾರೆ.
“ಇದು ಒಂದು ಇಮೋಷನಲ್ ಸಿನಿಮಾ. ಸಿನಿನಾದ ಪ್ರತಿಯೊಂದು ದೃಶ್ಯವನ್ನು ನಾನು ತುಂಬಾ ಎಂಜಾಯ್ ಮಾಡಿದೆ. ಕೆಲವೊಂದು ಸನ್ನಿವೇಶಗಳು ನನ್ನನ್ನು ಭಾವುಕಳನ್ನಾಗಿಯೂ ಮಾಡಿತು” ಎನ್ನುತ್ತಾರೆ ಸ್ಯಾಂಡಲ್ ವುಡ್ ಕ್ವೀನ್.
“ಕೊರೋನಾದ ಬಳಿಕ ಥಿಯೇಟರ್ ಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ಈ ಸಿನಿಮಾದ ವಿಚಾರದಲ್ಲಿ ಹಾಗಲ್ಲ. ಸಿನಿಪ್ರಿಯರು ಮತ್ತೆ ಥಿಯೇಟರ್ ನತ್ತ ಮುಖ ಮಾಡಲು ಇದು ಉತ್ತಮ ಸಿನಿಮಾ. ಕೇವಲ ಮಾತ್ರವಲ್ಲದೇ ಮಕ್ಕಳು ಕೂಡಾ ಈ ಸಿನಿಮಾವನ್ನು ಎಂಜಾಯ್ ಮಾಡಬಹುದು” ಎಂದಿದ್ದಾರೆ ರಮ್ಯಾ.
ಇದರ ಜೊತೆಗೆ ” ಈ ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶ ಕೂಡಾ ಇದೆ. ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಅವರ ಈ ಪ್ರಯತ್ನಕ್ಕೆ ನನ್ನ ಕಡೆಯಿಂದ ಬಹುಪರಾಕ್. ಇಷ್ಟು ಒಳ್ಳೆಯ ಕಥಾ ಹಂದರವುಳ್ಳ ಸಿನಿಮಾವನ್ನು ಥಿಯೇಟರ್ ನಲ್ಲೇ ಹೋಗಿ ನೋಡಬೇಕು” ಎಂದು ಹೇಳುತ್ತಾರೆ.