ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತನ್ನ ಬಿಡುಗಡೆಯ ದಿನಾಂಕವನ್ನು ಹೊರಹಾಕಿದೆ. ಇದೇ ಜೂನ್ 10ರಂದು ದೇಶದಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪಾನ್ ಇಂಡಿಯನ್ ಸಿನಿಮಾ ಇದಾಗಿರಲಿದ್ದು, ಎಲ್ಲ ಭಾಷೆಗಳಲ್ಲೂ ಒಂದೇ ದಿನದ ಬಿಡುಗಡೆಗೆ ಚಿತ್ರತಂಡದಿಂದ ಭರದ ಸಿದ್ಧತೆ ಸಾಗಿದೆ.
ಈ ನಡುವೆ ‘777 ಚಾರ್ಲಿ’ ಚಿತ್ರತಂಡ ತೆಲುಗಿನ ಸ್ಟಾರ್ ನಟರಾದ ರಾಣ ದಗ್ಗುಬಾಟಿ ಅವರ ಜೊತೆ ಕೈಜೋಡಿಸಿದೆ. ‘ಬಾಹುಬಲಿ’ ಚಿತ್ರದ ಬಲ್ಲಾಳದೇವ ಖ್ಯಾತಿಯ ರಾಣ ದಗ್ಗುಬಾಟಿ ‘777 ಚಾರ್ಲಿ’ ಚಿತ್ರದ ತೆಲುಗು ಭಾಷಾಂತರದ ಬಿಡುಗಡೆಯ ಜವಾಬ್ದಾರಿಯನ್ನ ಹೊರಲಿದ್ದಾರೆ. ರಾಣ ದಗ್ಗುಬಾಟಿ ಹಾಗು ‘ಸುರೇಶ್ ಪ್ರೊಡಕ್ಷನ್ಸ್’ ಚಿತ್ರದ ತೆಲುಗು ಭಾಷೆಯ ವಿತರಕರು(Distributors) ಆಗಿರಲಿದ್ದಾರೆ. ರಾಣ ದಗ್ಗುಬಾಟಿಯವರ ತಂದೆಯಾದ ಸುರೇಶ ದಗ್ಗುಬಾಟಿ ಮಾಲೀಕತ್ವದ ‘ಸುರೇಶ್ ಪ್ರೊಡಕ್ಷನ್ಸ್’ ಸಂಸ್ಥೆಯ ಸಹಾಯದೊಂದಿಗೆ ರಾಣ ‘777 ಚಾರ್ಲಿ’ಯೊಂದಿಗಿನ ಕೆಲಸಕ್ಕೆ ಕೈ ಹಾಕಿದ್ದಾರೆ.
ಈಗಾಗಲೇ ಚಿತ್ರದ ಉಳಿದ ಭಾಷೆಗಳ ವಿತರಕರ ಮಾಹಿತಿಯನ್ನ ಚಿತ್ರತಂಡ ಈಗಾಗಲೇ ಹೊರಹಾಕಿದೆ. ಕನ್ನಡದಲ್ಲಿ ‘ಕೆ ಆರ್ ಜಿ ಸ್ಟುಡಿಯೋಸ್’ ಮತ್ತು ‘ಕೆ ವಿ ಎನ್ ಪ್ರೊಡಕ್ಷನ್ಸ್’, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಅವರ ‘ಸ್ಟೋನ್ ಬೆಂಚ್ ಫಿಲಂಸ್’, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ‘ಪೃಥ್ವಿರಾಜ್ ಪ್ರೊಡಕ್ಷನ್ಸ್’ ಚಿತ್ರವನ್ನ ವಿತರಣೆ ಮಾಡಲಿದ್ದಾರೆ. ಈ ಸಾಲಿಗೆ ಇದೀಗ ದಗ್ಗುಬಾಟಿಯವರ ‘ಸುರೇಶ ಪ್ರೊಡಕ್ಷನ್ಸ್’ ಸೇರಿ, ತೆಲುಗಿನಲ್ಲಿ ವಿತರಣೆ ಮಾಡಲಿದ್ದಾರೆ.
ಕಿರಣ್ ರಾಜ್ ಕೆ ಅವರು ರಚಿಸಿ ನಿರ್ದೇಶನ ಮಾಡಿರುವಂತ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ರಕ್ಷಿತ್ ಶೆಟ್ಟಿ ಹಾಗು ಜಿ ಎಸ್ ಗುಪ್ತ ಅವರು ಸೇರಿ ‘ಪರಮ್ ವಾಹ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಚಿತ್ರವನ್ನ ನಿರ್ಮಾಣ ಮಾಡಿದ್ದು, ನೋಬಿನ್ ಪೌಲ್ ಅವರ ಸಂಗೀತ ಚಿತ್ರದಲ್ಲಿರಲಿದೆ. ಜೂನ್ 10ರಂದು ತೆರೆಕಾಣಲಿರೋ, ಈ ನಾಯಿಯೊಂದಿಗಿನ ಜೀವಗಾಥೆ, ‘ವೂಟ್’ ಹಾಗು ಕಲರ್ಸ್ ಕನ್ನಡ ವಾಹಿನಿಗೆ ತನ್ನ ಡಿಜಿಟಲ್ ಹಕ್ಕುಗಳನ್ನು ಒಪ್ಪಿಸಿದೆ.