ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ನೆಚ್ಚಿನ ನಟ. ಅಕಾಲದಲ್ಲಿ ನಮ್ಮನ್ನೆಲ್ಲ ಅಗಲಿದ್ದರೂ ಸಹ , ಅವರು ಹಾಗು ಅವರ ನೆನಪು ಎಂದಿಗೂ ಅಜರಾಮರ. ನಾಯಕನಟನಾಗಿ ಮಾತ್ರವಲ್ಲದೆ, ಅತಿಥಿ ಪಾತ್ರಗಳಲ್ಲಿ ವಿಶೇಷತೆಯಿಂದ ಬಂದು ಅಪ್ಪು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಾಲಿಗೆ ಹಲವು ಹೊಸಬರ ಸಿನಿಮಾ ಕೂಡ ಸೇರುತ್ತದೆ. ಸದ್ಯ ಅವರು ನಟಿಸಬೇಕಿದ್ದ, ನಟಿಸಲಾಗದ ಹೊಸ ಸಿನಿಮಾ, ಭಾರವಾದ ಹೃದಯದಿಂದಲೇ ತನ್ನ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರ ಬೇರಾವುದು ಅಲ್ಲದೇ, ಚಂದನವನದ ದಿಗ್ಗಜ ನಟರಾದ ರಂಗಾಯಣ ರಘು ಅವರ ನಟನೆಯ ‘ರಂಗಸಮುದ್ರ’.
ರಂಗಾಯಣ ರಘು ಅವರು ಕನ್ನಡಿಗರು ಕಂಡಂತಹ ಧೀಮಂತ ನಟರುಗಳಲ್ಲಿ ಒಬ್ಬರು. ದಶಕಗಳಿಂದ ಸಿನಿರಂಗದಲ್ಲಿ ಕೆಲಸ ಮಾಡುತ್ತಿರುವ ಇವರು ಮಾಡದೆ ಇರುವ ಪಾತ್ರವೇ ಇಲ್ಲ ಎಂದರೂ ಪ್ರಾಯಷಃ ತಪ್ಪಾಗದು ಎನ್ನಬಹುದು. ಪೋಷಕ ನಟ, ಹಾಸ್ಯ, ವಿಲನ್, ಒಂದ ಎರಡಾ. ಎಲ್ಲದರಲ್ಲೂ ರಘು ಅವರದ್ದು ಎತ್ತಿದ ಕೈ. ಸದ್ಯ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾ, ‘ರಂಗಸಮುದ್ರ’. ಇದೊಂದು ಗ್ರಾಮೀಣ ಕಥೆಯಾಗಿದ್ದು, ರಘು ಅವರು ಊರಿನ ಮುಖ್ಯಸ್ಥರಾಗಿ ನಟಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಸದ್ಯ ತನ್ನ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ. ರಘು ಅವರ ಜೊತೆಗೆ, ಬಹುಭಾಷಾ ನಟ ಸಂಪತ್, ಕರಾವಳಿಯ ಕೆ ವಿ ಆರ್, ಮೋಹನ್ ಜುನೇಜ, ದಿವ್ಯ ಗೌಡ, ಉಗ್ರಂ ಮಂಜು, ಗುರುರಾಜ್ ಹೊಸಕೋಟೆ ಮುಂತಾದ ನಟರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿನ ವಿಶೇಷ ಪಾತ್ರವೊಂದರಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಬೇಕಿತ್ತಂತೆ.
ಅಪ್ಪು ಅವರೊಂದಿಗೆ ಮಾತುಕತೆ ಕೂಡ ನಡೆಸಿ ಅಕ್ಟೋಬರ್ ತಿಂಗಳಿನಲ್ಲಿ ಚಿತ್ರೀಕರಿಸುವುದು ಎಂದೂ ಕೂಡ ನಿರ್ಧರಿಸಲಾಗಿತ್ತು. ಆದರೆ ಆಗಿದ್ದೆ ಬೇರೆ. ಈ ಹೊತ್ತಿಗೂ ಮುಂಚೆಯೇ ಅಪ್ಪು ನಮ್ಮನ್ನ ಅಗಲಿದ್ದರು. ಸಿನಿಮಾದ ವಿಶೇಷ ಪಾತ್ರದಲ್ಲಿ ಅಪ್ಪು ನಟಿಸುತ್ತಿದ್ದಾರೆ ಎಂಬ ವಿಚಾರವೇ ಚಿತ್ರತಂಡಕ್ಕೆ ಸಂತಸ ನೀಡಿತ್ತು. ಆದರೆ ಅದಾಗಲೇ ಇಲ್ಲ. ಸದ್ಯ ಈ ಪಾತ್ರಕ್ಕೆ ಇನ್ನೊಬ್ಬ ಸ್ಟಾರ್ ನಟರನ್ನು ಕೇಳಿ, ನಟಿಸಿದ್ದಾರಂತೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.