ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿಯಾಗಿ ನಟನಾ ಜಗತ್ತಿಗೆ ಪರಿಚಿತರಾದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕರ್ಣಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಅಂಗಳದಲ್ಲೂ ತನ್ನ ನಟನಾ ಕಂಪನ್ನು ಪಸರಿಸಿರುವ ಮಂಜಿನ ನಗರಿ ಚೆಲುವೆ ಈಗ ಮಗದೊಂದು ಸಿಹಿಸುದ್ದಿ ನೀಡಿದ್ದಾರೆ. ಅರೇ, ಅದೇನಂತೀರಾ.. ಇಲ್ಲಿ ಕೇಳಿ.
ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರ ಸಾಲಿಗೆ ಸೇರಿರುವ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ಸಿನಿಮಾ ಕ್ಷೇತ್ರದ ಪಾಕ್ಷಿಕ ಫಿಲಂಫೇರ್ ನ ಮುಖಪುಟದ ರೂಪದರ್ಶಿಯಾಗಿ ಮೋಡಿ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆಯರ ಪಟ್ಟಿಗೆ ಸೇರಿದ್ದಾರೆ. ಸಿನಿಮಾ ರಂಗದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮನೋ ನಟನೆಯ ಮೂಲಕ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ರಶ್ಮಿಕಾ ಮಂದಣ್ಣ ಫಿಲಂಫೇರ್ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ರಶ್ಮಿಕಾ ಅಭಿಮಾನಿಗಳಿಗೆ ಖುಷಿ ತಂದಿದೆ.
ಸದ್ಯ ಪರಭಾಷೆಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲಿದ್ದಾರಾ ಎಂದು ಕಾದುನೋಡಬೇಕಾಗಿದೆ.