ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಭಾರತದಾದ್ಯಂತ ವಿವಿಧ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಮುಗಿಸಿ ಸದ್ಯ ಬಾಲಿವುಡ್ ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ ರಶ್ಮಿಕಾ. ‘ನ್ಯಾಷನಲ್ ಕ್ರಶ್’ ಎಂದೇ ಖ್ಯಾತಾರಾಗಿದ್ದ ಇವರು ಇದೀಗ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಇವರ ಮುಂದಿನ ಚಿತ್ರ ಬಾಲಿವುಡ್ ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆಗೆ ಎನ್ನಲಾಗುತ್ತಿದೆ.
ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಇವರು ತದನಂತರ ಹಿಂತಿರುಗಿ ನೋಡಲೇ ಇಲ್ಲ. ಟಾಲಿವುಡ್ ಕೊಲಿವುಡ್ ಎಲ್ಲದರಲ್ಲೂ ಸೈ ಎನಿಸಿಕೊಂಡು ಬಾಲಿವುಡ್ ನಿಂದಲೂ ಬೇಡಿಕೆ ಪಡೆದವರು. ಸಿದ್ದಾರ್ಥ್ ಮಲ್ಹೋತ್ರ ಅಭಿನಯದ ‘ಮಿಷನ್ ಮಜ್ನು’ ಸಿನಿಮಾದಿಂದ ಬಾಲಿವುಡ್ ಗೆ ಪಾದರ್ಪಣೆ ಮಾಡಿದ ಇವರು, ಸದ್ಯ ಹಿಂದಿ ತೆರೆಗಳ ಮೇಲೆ ಮಿಂಚಲು ಕಾಯುತ್ತಿದ್ದಾರಷ್ಟೇ. ಚಿತ್ರೀಕರಣ ಸಂಪೂರ್ಣವಾಗಿರೋ ‘ಮಿಷನ್ ಮಜ್ನು’ವಿನ ಬೆಳ್ಳಿತೆರೆ ಭೇಟಿಗೆ ಮುಹೂರ್ತ ಇನ್ನು ಗೊತ್ತಾಗಿಲ್ಲ. ಇದಲ್ಲದೆ ತಮ್ಮ ಎರಡನೇ ಹಿಂದಿ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ. ಸದ್ಯದಲ್ಲೇ ಅವರ ಮೂರನೇ ಚಿತ್ರದ ಘೋಷಣೆ ಆಗೋ ಸಾಧ್ಯತೆಯಿದೆ.
‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರು ರಣ್ಬೀರ್ ಕಪೂರ್ ಜೊತೆಗೆ ಸಿನಿಮಾವೊಂದನ್ನು ಮಾಡುತ್ತಿದ್ದು, ‘ಅನಿಮಲ್’ ಎಂದು ಚಿತ್ರಕ್ಕೆ ನಾಮಕರಣ ಮಾಡಲಾಗಿದೆ. ಈ ಹಿಂದೆ ಇದರ ನಾಯಕಿಯಾಗಿ ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ನಟಿಸುವುದೆಂದು ಖಾತ್ರಿಯಾಗಿತ್ತು. ಆದರೆ ಅವರು ಈ ಸಿನಿಮಾದಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರ ಜಾಗವನ್ನ ತುಂಬಲು ರಶ್ಮಿಕಾ ಮಂದಣ್ಣನವರನ್ನು ಚಿತ್ರತಂಡದವರು ಕೇಳಿಕೊಂಡಿದ್ದು, ರಶ್ಮಿಕಾ ಅವರು ಕೂಡ ಸಂತಸದಿಂದ ಒಪ್ಪಿದ್ದಾರೆ ಎನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸಿನಿತಂಡದಿಂದ ಅಧಿಕೃತ ಘೋಷಣೆ ಇನ್ನು ಬಾಕಿಯಿದ್ದು, ಈ ವಿಷಯ ಖಾತ್ರಿಯಾಗಿದ್ದೆ ಆದಲ್ಲಿ, ರಶ್ಮಿಕಾ ರಣ್ಬೀರ್ ಕಪೂರ್ ಅವರ ಪತ್ನಿಯಾಗಿ ನಟಿಸಲಿದ್ದಾರೆ.