‘ಡೈನಾಮಿಕ್ ಪ್ರಿನ್ಸ್’ ಎಂದೇ ಖ್ಯಾತರಾಗಿರುವ ದೇವರಾಜ್ ಅವರ ಪುತ್ರ ಖ್ಯಾತ ನಟ ಪ್ರಜ್ವಲ್ ದೇವರಾಜ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಮೇಲೆ ಒಂದರಂತೆ ಹೊಸ ಸಿನಿಮಾಗಳ ಮೂಲಕ ಬೆಳ್ಳಿತೆರೆ ಏರುತ್ತಿರುವ ಇವರ ಮುಂದಿನ ಸಿನಿಮಾವೊಂದು ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ತನ್ನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆ ಸಿನಿಮಾವೇ ‘ಅಬ್ಬರ’.
ಕೆ ರಾಮನಾರಾಯಣ್ ಅವರು ನಿರ್ದೇಶಿಸಿರುವ ‘ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಮೂರು ವಿಭಿನ್ನ ರೀತಿಯ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು(ಜುಲೈ 18) ಸಿನಿಮಾದ ಟೀಸರ್ ಒಂದು ಬಿಡುಗಡೆಯಾಗಿದ್ದು, ಇದೇ ಆಗಸ್ಟ್ 12ರಿಂದ ಸಿನಿಮಾ ಬೆಳ್ಳಿತೆರೆ ಮೇಲೆ ಬರುತ್ತಿದೆ ಎಂಬ ಅಧಿಕೃತ ಘೋಷಣೆಯನ್ನು ಚಿತ್ರತಂಡ ಟೀಸರ್ ನ ಮೂಲಕ ಮಾಡಿದೆ. ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಆಗಿರಲಿದ್ದು, ಪ್ರಜ್ವಲ್ ಅವರ ಜೊತೆಗೆ ರಾಜಶ್ರೀ ಪೊನ್ನಪ್ಪ, ಲೇಖ ಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ರವಿ ಬಸ್ರುರ್ ಕೆಲಸ ಮಾಡಿದ್ದು, ಮೈ ನವೀರೇಳಿಸುವ ಬಿಜಿಎಂ ಗಳ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ಇದೇ ಆಗಸ್ಟ್ 12ರಿಂದ ರಾಜ್ಯದಾದ್ಯಂತ ಥೀಯೇಟರ್ ಗಳಲ್ಲಿ ‘ಅಬ್ಬರ’ ಬಿಡುಗಡೆಯಾಗಲಿದ್ದು, ಚಿತ್ರಮಂದಿರಗಳಲ್ಲಿ ಹೇಗೆ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ.