ಕನ್ನಡದಲ್ಲಿ ಸದ್ಯ ಎಲ್ಲ ವರ್ಗದ ಸಿನಿಪ್ರಿಯರನ್ನೂ ಸೆಳೆವಂತ ಒಬ್ಬ ನಟ-ನಿರ್ದೇಶಕನೆಂದರೆ ಅದು ರಿಷಬ್ ಶೆಟ್ಟಿಯವರು. ನಟನೆಯಲ್ಲಿ, ನಿರ್ದೇಶನದಲ್ಲಿ, ಕಥಾರಚನೆಯಲ್ಲಿ ಜೊತೆಗೆ ನಿರ್ಮಾಣದಲ್ಲಿ, ಎಲ್ಲದರಲ್ಲೂ ಎತ್ತಿದ ಕೈ ಎಂದು ಸಾಬೀತು ಮಾಡಿರುವ ಇವರು ಇದೀಗ ತಮ್ಮ ಮುಂದಿನ ಚಿತ್ರದ ಬಿಡುಗಡೆಯ ಭರದಲ್ಲಿದ್ದಾರೆ. ಅದುವೇ ‘ಹರಿಕಥೆ ಅಲ್ಲ ಗಿರಿಕಥೆ’.
ಆದರೆ ಈ ಬಾರಿ ರಿಷಬ್ ಶೆಟ್ಟಿ ಕೇವಲ ನಟ ಹಾಗು ನಿರ್ಮಾಪಕ ಮಾತ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಅನಂತ್ ಹಾಗು ಅನಿರುಧ್ ಮಹೇಶ್ ಅವರ ಜೋಡಿ ಈ ಚಿತ್ರದ ಕಥೆಯನ್ನ ಬರೆದು ನಿರ್ದೇಶನವನ್ನು ಕೂಡ ತಾವೇ ಮಾಡಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ, ನಿರ್ದೇಶಕನಾಗಬೇಕೆಂಬ ಕನಸನ್ನ ಹೊತ್ತು ಹೊರಡೋ ಪಯಣದ ಕಥೆಯೇ ಈ ‘ಹರಿಕಥೆ ಅಲ್ಲ ಗಿರಿಕಥೆ’. 2021ರ ಅಂತ್ಯಕ್ಕೂ ಮೊದಲೇ ಸುಮಾರು 90% ಚಿತ್ರೀಕರಣವನ್ನ ಮುಗಿಸಿಕೊಂಡಿದ್ದ ಈ ಸಿನಿಮಾ ಅಳಿದುಳಿದ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಜೂನ್ 23ರಂದು ಚಿತ್ರ ಚಿತ್ರಮಂದಿರಗಳ ಬೆಳ್ಳಿಪರದೆಯನ್ನ ಸೇರಲಿದೆ.
ರಿಷಬ್ ಶೆಟ್ಟಿ ಯವರು ನಾಯಕನಾಗಿ ಕಾಣಿಸಿಕೊಳ್ಳುವ ಈ ಚಿತ್ರದಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್ ಒಬ್ಬ ನಾಯಕಿ. ಸಿನಿಮಾ ನಟಿಯಗಬೇಕೆಂಬ ಕನಸಿರುವ ಹುಡುಗಿಯೊಬ್ಬಳ ಪಾತ್ರವಂತೆ ಇವರದ್ದು.ಇವರಷ್ಟೇ ಅಲ್ಲದೇ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ, ರಘು ಪಾಂಡೇಶ್ವರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸಂದೇಶ್ ನಾಗರಾಜ್ ಹಾಗು ರಿಷಬ್ ಶೆಟ್ಟಿಯವರು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿರಲಿದೆ. ಇದೇ ಬರುವ ಜೂನ್ 23ರಂದು ಬಿಡುಗಡೆಯಾಗಲಿರೋ ಈ ಚಿತ್ರದ ಪ್ರಚಾರ ಕಾರ್ಯಗಳು ಇನ್ನಷ್ಟೇ ಆರಂಭವಾಗಬೇಕಿವೆ.