ಕನ್ನಡದಿಂದ ತೆಲುಗುವಿಗೆ, ತೆಲುಗುವಿನಿಂದ ಕನ್ನಡಕ್ಕೆ ಕಲಾವಿದರ ಸಂಚಾರ ಇದೀಗ ಸರ್ವೇಸಾಮಾನ್ಯ. ಕನ್ನಡದ ಅದೆಷ್ಟೋ ಹೆಸರಾಂತ ನಟನಟಿಯರು ಟೋಲಿವುಡ್ ನಲ್ಲಿ ಮಿಂಚು ಬೆಳಗಿಸಿದ್ದಾರೆ. ಹಾಗೆಯೇ ತೆಲುಗುವಿನ ಹಲವಾರು ನಟರು, ನಟಿಯರು ಖಳನಾಯಕರು ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆಯೊಂದಾಗಿದೆ. ಅವರೇ ಕನ್ನಡದ ಬಹುಬೇಡಿಕೆಯ ನಟ-ನಿರ್ದೇಶಕ ಹಾಗು ನಿರ್ಮಾಪಕರು ಆಗಿರುವಂತ ರಿಷಬ್ ಶೆಟ್ಟಿ.
ಬಾಲಿವುಡ್ ಬೆಡಗಿ ತಾಪಸೀ ಪನ್ನು ಅವರು ನಟಿಸಿರುವಂತ ಹೊಚ್ಚಹೊಸ ಚಲನಚಿತ್ರ, ‘ಮಿಷನ್ ಇಂಪಾಸಿಬಲ್’ ಚಿತ್ರದ ಟ್ರೈಲರ್ ಇದೇ ಮಾರ್ಚ್ 15ರಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಮಾತುಗಳನ್ನ ಚಿತ್ರತಂಡ ಕೇಳಿಕೊಳ್ಳುತ್ತಿದೆ. ಇದೇ ಚಿತ್ರದಲ್ಲಿ ‘ಖಲೀಲ್’ ಎಂಬ ಪಾತ್ರವಾಗಿದ್ದಾರೆ ರಿಷಬ್ ಶೆಟ್ಟಿ. ಸದ್ಯ ತಿಳಿದುಬಂದಿರೋ ಹಾಗೇ ‘ಖಲೀಲ್’ ಕಥೆಯ ಖಳನಾಯಕರಲ್ಲಿ ಒಬ್ಬನಾಗಿದ್ದು, ಹೆಚ್ಚಿನ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಮೂರು ನಿಮಿಷದ ಟ್ರೈಲರ್ ನ ಕೊನೆಯ ಹಂತವನ್ನ ಆಕ್ರಮಿಸಿಕೊಂಡ ರಿಷಬ್ ಶೆಟ್ಟಿಯವರ ಪಾತ್ರ ತುಸು ಕುತೂಹಲವನ್ನ ಹುಟ್ಟುಹಾಕುತ್ತಿದೆ.
ತೆಲುಗಿನ ಹಿಟ್ ಸಿನಿಮಾ ‘ಏಜೆಂಟ್ ಸಾಯಿ ಶ್ರೀನಿವಾಸ್ ಆತ್ರೆಯ’ ಖ್ಯಾತಿಯ ನಿರ್ದೇಶಕರಾದ ಸ್ವರೂಪ್ ಆರ್ ಎಸ್ ಜೆ ಅವರೇ ಈ ಕಥೆಯ ಸೃಷ್ಟಿಕರ್ತರು. ಆ ಸಿನಿಮಾದ ರೀತಿಯೇ ಇದು ಕೂಡ ಒಂದು ಕಾಮಿಡಿ ತುಂಬಿರೋ ರೋಮಾಂಚನಕಾರಿ ಕಥೆಯಾಗಿರಲಿದೆಯಂತೆ. ದೇಶದೆಲ್ಲೆಡೆ ಹುಡುಕಾಡುತ್ತಿದ್ದ ಅಪರಾಧಿ ‘ದಾವೂದ್ ಇಬ್ರಾಹಿಂ’ ಅನ್ನು ಹುಡುಕಿ ಹೊರಡೊ ರಘುಪತಿ, ರಾಘವ ರಾಜಾರಾಮ್ ಎನ್ನುವ ಮೂರು ಎಳೆವಯಸ್ಸಿನ ಮಕ್ಕಳ ಕಥೆಯೇ ಈ ‘ಮಿಷನ್ ಇಂಪಾಸಿಬಲ್’. ತಾಪಸೀ ಪನ್ನು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರೋ ಈ ಸಿನಿಮಾ ಇದೇ ಏಪ್ರಿಲ್ 1ರಂದು ಬೆಳ್ಳಿತೆರೆಯ ಮೇಲೆ ಬರಲಿದೆ.