ಕರ್ನಾಟಕದಲ್ಲೇ ಕನ್ನಡ ಅವತರಣಿಕೆಗಳಿಗೆ ಬರ ಬಂದಿದೆ. ಇದು ಪ್ರೇಕ್ಷಕರನ್ನ ರೊಚ್ಚಿಗೆಳಿಸಿದೆ. ಹೀಗಾಗಿದ್ದು ತೆಲುಗು ಮೂಲದ ಭಾರತದ ಬಹುನಿರೀಕ್ಷಿತ ಪಂಚಾಭಾಷ ಚಿತ್ರ, RRRಗೆ. ಇನ್ನೇನು ಬಿಡುಗಡೆಗೆ ಒಂದು ದಿನವಷ್ಟೇ ಬಾಕಿ ಇರುವಾಗ, ಕನ್ನಡಿಗರಿಂದ ‘#BoycottRRRinKarnataka’, ‘#ಡಬ್ಬಿಂಗ್ಇದುಕನ್ನಡಪರ’, ‘#releaseRRRinKannada’ ಮುಂತಾದ ಟ್ಯಾಗ್ ಗಳು ಎಲ್ಲೆಡೆ ಹರಿದಾಡುತ್ತಿವೆ.
ಮಾರ್ಚ್ 25ರಂದು ಪ್ರಪಂಚಾದಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲು RRR ಸಿನಿಮಾ ಕಾಯುತ್ತಿದೆ. ಈ ‘ದೃಶ್ಯಕಾವ್ಯ’ವನ್ನು ತಮ್ಮ ಭಾಷೆಯಲ್ಲೇ ಕಣ್ತುಂಬಿಕೊಳ್ಳಲು ಭಾರತದ ವಿವಿಧ ಭಾಗದ ಅಭಿಮಾನಿಗಳು ಕಾಯುತ್ತಿದ್ದಾರೆ. ಕನ್ನಡಿಗರು ಸಹ. ಆದರೆ ಈ ಬಾರಿಯು ಕೂಡ ‘ಪುಷ್ಪ’ ಸಿನಿಮಾದ ಸಂಧರ್ಭಗಳೇ ಮರುಕಳಿಸೊ ಹಾಗಿದೆ. ಸಿನಿಮಾದ ಕನ್ನಡ ರೂಪಾಂತರಕ್ಕಾಗಿ ನಾಯಕನಟರಾದ ಜೂನಿಯರ್ ಎನ್ ಟಿ ಆರ್ ಹಾಗು ರಾಮ್ ಚರಣ್ ಅವರು ಕನ್ನಡವನ್ನ ಸ್ಪಷ್ಟವಾಗಿ ಕಲಿತು, ಕನ್ನಡದಲ್ಲಿ ತಾವೇ ಖುದ್ದಾಗಿ ಧ್ವನಿ ನೀಡಿದ್ದರು. ಆದರೆ ಇದೀಗ ಕರ್ನಾಟಕದಲ್ಲೇ ಕನ್ನಡದ ಶೋಗಳು ಬೆರಳೆಣಿಕೆಯಷ್ಟು ಕಂಡುಬರುತ್ತಿವೆ. ಇದೆ ಕಾರಣಕ್ಕೆ ಹಲವಾರು ಕನ್ನಡಿಗರು ‘RRRಬಹಿಷ್ಕರಿಸಿ’ ಎಂಬ ಘೋಷಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ.
ಇತ್ತ ಈ ನಿಲುವು ಭದ್ರವಾಗುತ್ತಿದ್ದಂತೆ ಸಿನಿಮಾದ ಕನ್ನಡ ವಿತರಕರಾದ ‘KVN ಪ್ರೊಡಕ್ಷನ್ಸ್’ ಸಂಸ್ಥೆ ತಮ್ಮ ಕಡೆಯ ಕಥೆಯನ್ನ ಹೊರಹಾಕಿದ್ದಾರೆ. “ಕನ್ನಡ ಅವತರಣಿಕೆಗಾಗಿ ರಾಮ್ ಚರಣ್ ಹಾಗು ಜ್ಯೂನಿಯರ್ ಎನ್ ಟಿ ಆರ್ ಅವರು ವಿಶೇಷ ಪ್ರಯತ್ನ ಪಟ್ಟು, ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ನೀವು ಈ ದೃಶ್ಯಕಾವ್ಯವನ್ನ ಕನ್ನಡದಲ್ಲೇ ನೋಡಬಯಸುತ್ತೀರಿ ಎಂದು ಭಾವಿಸುತ್ತೇವೆ. ಕನ್ನಡ ಅವತರಣಿಕೆಯನ್ನು ಬಿಡುಗಡೆಗೊಳಿಸಲು ಹಿಂಜರಿಯುತ್ತಿರುವ ಚಿತ್ರಮಂದಿರದ ಮಾಲೀಕರುಗಳ ಮನವೊಲಿಸುವ ಕಾರ್ಯ ನಾವು ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚು ಶೋ ನೀಡಲು ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾವನ್ನ ಕನ್ನಡದಲ್ಲೇ ಬಿಡುಗಡೆಗೊಳಿಸಲು ನೀವು ನಮಗೆ ಸಹಾಯ ಮಾಡುತ್ತೀರಿ ನಮ್ಮೊಂದಿಗಿದ್ದು ನಮ್ಮನ್ನು ಬೆಂಬಲಿಸುತ್ತೀರಿ ಎಂದು ಭಾವಿಸುತ್ತೇವೆ” ಎಂದು ಬರೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.
ಕನ್ನಡದಲ್ಲಿ ಹೀಗಾಗುತ್ತಿರುವುದು ಇದೇನು ಮೊದಲ ಬಾರಿಯಲ್ಲ. ಪುಷ್ಪ ಸಿನಿಮಾದ ಬಿಡುಗಡೆ ವೇಳೆಯಲ್ಲೂ ಕನ್ನಡದ ಅವತರಣಿಕೆ ಹೆಸರಿಗಷ್ಟೇ ಜೀವತಾಳಿತ್ತು. ಬಹುಪಾಲು ಕನ್ನಡಿಗರು ಚಿತ್ರಮಂದಿರಗಳಲ್ಲಿ ತೆಲುಗು ಆವೃತ್ತಿಯನ್ನೇ ಕಣ್ತುಂಬಿಕೊಂಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಸಿನಿಮಂದಿರದವರು ಹಿಂದೇಟು ಹಾಕುತ್ತಿರುವಂತೆ ಕಾಣುತ್ತಿದೆ. ಸದ್ಯ ಅರ್ಧಪಾಲು ಜವಾಬ್ದಾರಿಯನ್ನು ಪ್ರೇಕ್ಷಕರ ಮೇಲೆ ಹೇರಿರುವ ವಿತರಕರು, ಅತಿಹೆಚ್ಚು ಕನ್ನಡ ಶೋಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಸದ್ಯ ಕನ್ನಡದ ಶೋಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಆದಷ್ಟು ಬೇಗ ಸಾಕಷ್ಟು ಕನ್ನಡದ ಅವತರಣಿಕೆಗಳು ತೆರೆಮೇಲೆ ಬರುವಂತಾಗಬಹುದು. ಪಾನ್-ಇಂಡಿಯನ್ ಚಿತ್ರ ಎಂದಾದ ಮೇಲೆ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಅತೀ ಹೆಚ್ಚು ಬಿಡುಗಡೆಯಾಗಬೇಕು ಎಂಬುದು ಅಭಿಮಾನಿಗಳ ಆಶಯ. RRRನ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿಯೇ ಶಿವಣ್ಣ ಈ ಮಾತು ಹೇಳಿದ್ದರು. RRR ಅಂತ ದೊಡ್ಡ ಸಿನಿಮಾಗಳಲ್ಲೇ ಪದೇ ಪದೇ ಹೀಗಾಗುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗುತ್ತಿದೆ.