ಪ್ರೇಮಂ ಖ್ಯಾತಿಯ ನಟಿ ಸಾಯಿ ಪಲ್ಲವಿ ತಮ್ಮ ಮುಂದಿನ ಚಿತ್ರ ಗಾರ್ಗಿ ಗಾಗಿ ಕನ್ನಡ ಕಲಿತು ಸುದ್ದಿಯಲ್ಲಿದ್ದಾರೆ. ಗಾರ್ಗಿ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹೀಗಾಗಿ ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ ಮಾಡಿದ್ದು ಈ ದೃಶ್ಯವನ್ನು ಚಿತ್ರ ತಂಡ ಹಂಚಿಕೊಂಡಿತ್ತು.
ಕನ್ನಡ ಕಲಿತ ಅನುಭವವನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. “ತಮಿಳು ಮಾತನಾಡುವ ಹುಡುಗಿಯೊಬ್ಬಳು ಕನ್ನಡ ಮಾತನಾಡುವಂತೆ ಇದು ಇರುವುದಿಲ್ಲ. ಅಪ್ಪಟ ಕನ್ನಡ ಹುಡುಗಿಯಂತೆ ಡಬ್ ಮಾಡಿದ್ದೇನೆ. ಕನ್ನಡ ಮಾತನಾಡುವುದು ಖುಷಿ ನೀಡುತ್ತದೆ. ಲ,ಣ,ನ ಅಕ್ಷರಗಳನ್ನು ಉಪಯೋಗಿಸುವಾಗ ಸವಾಲೆನಿಸಿತು. ನನ್ನ ಜೊತೆಗೆ ಉತ್ತಮ ತಂಡ ಇತ್ತು. ಇದು ಖುಷಿ ತಂದಿದೆ. ನಾನು ಉತ್ತಮವಾಗಿ ಕನ್ನಡದಲ್ಲಿ ಡಬ್ ಮಾಡಿದ್ದೇನೆ ಎಂದು ನೋಡುಗರಿಗೆ ಎನಿಸಿದರೆ ಆ ಕ್ರೆಡಿಟ್ ಈ ತಂಡಕ್ಕೆ ಸೇರಬೇಕು” ಎಂದಿದ್ದಾರೆ.
ನಟಿ ಹಾಗೂ ನಿರ್ದೇಶಕಿ ಶೀತಲ್ ಶೆಟ್ಟಿ ಅವರ ಶೀ ಟೇಲ್ಸ್ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ನಡೆದಿದೆ. ತಮಿಳು ಸಂಭಾಷಣೆಗಳನ್ನು ಕನ್ನಡಕ್ಕೆ ಬದಲಾಯಿಸಿ ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಡಬ್ ಮಾಡಲು ಶೀತಲ್ ಶೆಟ್ಟಿ ತರಬೇತಿ ನೀಡಿದ್ದರು.
ಬೆಂಗಳೂರಿನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಸಾಯಿ ಪಲ್ಲವಿ ಅವರಿಗೆ ಇಲ್ಲಿನ ವಿವಿಧ ಶೈಲಿಯ ಆಹಾರ ಸವಿಯುವ ಆಸೆಯಂತೆ. ಗಂಟು ಮೂಟೆ , ಕೆಜಿಎಫ್ ಚಾಪ್ಟರ್ 1 , ಕೆಜಿಎಫ್ ಚಾಪ್ಟರ್ 2 , ಲೂಸಿಯಾ ,ಯೂ ಟರ್ನ್ ,ಗರುಡ ಗಮನ ವೃಷಭ ವಾಹನ ಮುಂತಾದ ಚಿತ್ರಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ.
ಗಾರ್ಗಿ ಸಿನಿಮಾವನ್ನು ಗೌತಮ್ ರಾಮಚಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.