ಪಾನ್-ಇಂಡಿಯನ್ ನಿರ್ದೇಶಕ, ಕನ್ನಡಿಗ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್ ಚಾಪ್ಟರ್ 2ರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕೆಜಿಎಫ್ ಚಾಪ್ಟರ್ 1 ರಿಂದ ಭಾರತದಾದ್ಯಂತ ಪ್ರಖ್ಯಾತರಾದ ನೀಲ್, ತಮ್ಮ ಮುಂದಿನ ಚಿತ್ರವನ್ನ ಟೋಲಿವುಡ್ ನ ಪಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರಿಗೆ ನಿರ್ದೇಶಿಸುತ್ತಿರಿವುದು ಎಲ್ಲರಿಗೂ ಗೊತ್ತಿರೋ ವಿಷಯ. ಈಗ ಈ ಚಿತ್ರದ ಬಗೆಗಿನ ಗುಸುಗಸುವೊಂದಕ್ಕೆ ನೀಲ್ ತೆರೆ ಎಳೆದಿದ್ದಾರೆ.
‘ಸಲಾರ್’ ಮುಂದೆ ಬರಲಿರೋ ಚಿತ್ರಗಳ ಸಾಲಿನಲ್ಲಿರೋ ಅತ್ಯಂತ ನಿರೀಕ್ಷಿತ ಪಾನ್ ಇಂಡಿಯನ್ ಚಿತ್ರ ಎಂದರೆ ತಪ್ಪಿಲ್ಲ. ‘ಹೊಂಬಾಳೆ ಫಿಲಂಸ್’ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾ ಸೇಟ್ಟೆರಿದಾಗಿನಿಂದ ಗಾಳಿಸುದ್ದಿಯೊಂದು ಎಲ್ಲರ ಮನಕೆಡಿಸಿತ್ತು. ‘ಉಗ್ರಂ’ ಚಿತ್ರದ ಕಥೆಯೇ ‘ಸಲಾರ್’ ಸಿನಿಮಾದಲ್ಲೂ ಇರಲಿದೆ, ‘ಸಲಾರ್’ ಉಗ್ರಂ ಸಿನಿಮಾದ ಪಾನ್ ಇಂಡಿಯನ್ ಅವತರಣಿಕೆ ಅಷ್ಟೇ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಒಂದಷ್ಟು ವರ್ಗದವರಿಗೆ ಈ ವಿಷಯ ನಿರಾಸೆ ತಂದಿದ್ದರೂ, ಒಂದಷ್ಟು ಜನರನ್ನು ಚಕಿತಗೊಳಿಸಿತ್ತು. ಆದರೀಗ ಪ್ರಶಾಂತ್ ನೀಲ್ ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಕೆಜಿಎಫ್ ಚಾಪ್ಟರ್ 2ರ ಪ್ರಚಾರದಲ್ಲಿ ಭಾರತದಾದ್ಯಂತ ಚಿತ್ರತಂಡ ಮೆರವಣಿಗೆ ಹೋಗುತ್ತಿದೆ. ಈ ಸಂದರ್ಭದ ಸುದ್ದಿಗೋಷ್ಠಿಯೊಂದರಲ್ಲಿ ಪ್ರಶಾಂತ್ ನೀಲ್ ಅವರಿಗೆ ‘ಸಲಾರ್’ ಬಗೆಗಿನ ಪ್ರಶ್ನೆಯೊಂದನ್ನ ಕೇಳಲಾಯ್ತು. ಉತ್ತರಿಸುತ್ತ ಪ್ರಶಾಂತ್ ನೀಲ್, “ಉಗ್ರಂ ನನ್ನ ಮೊದಲ ಚಿತ್ರ. ನಾನು ಮುಂದೆ ಮಾಡೋ ಎಲ್ಲ ಚಿತ್ರಗಳಲ್ಲೂ ಉಗ್ರಂ ನ ಛಾಪು ಇದ್ದೆ ಇರುತ್ತದೆ. ಕೆಜಿಎಫ್ ನಲ್ಲೂ ಇತ್ತು, ಇರುತ್ತದೆ ಕೂಡ. ಅದು ನನ್ನ ಸಿನಿಮಾಗಳ ರೀತಿ. ಆದರೆ ಸಲಾರ್ ಒಂದು ಹೊಸ ಕಥೆ. ಇದರ ಕಥೆಯಲ್ಲಿ ಉಗ್ರಂ ಯಾವ ರೀತಿಯ ಪ್ರಭಾವವನ್ನು ಬೀರಿಲ್ಲ. ಸಲಾರ್ ಉಗ್ರಂ ನ ರಿಮೇಕ್ ಅಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ಸುಮಾರು ಶೇಕಡ 30ರಷ್ಟು ಚಿತ್ರೀಕರಣವನ್ನ ಸಲಾರ್ ಚಿತ್ರತಂಡ ಮುಗಿಸಿಕೊಂಡಿದೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿರೋ ಈ ಚಿತ್ರಕ್ಕೆ ಶೃತಿ ಹಾಸನ್ ನಾಯಕಿಯಾಗಿರಲಿದ್ದಾರೆ. ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗು ರವಿ ಬಸ್ರುರ್ ಅವರ ಸಂಗೀತ ಚಿತ್ರಕ್ಕಿರಲಿದ್ದು, ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿದೆ. ಕೆಜಿಎಫ್ ಚಾಪ್ಟರ್ 2ರ ಬಿಡುಗಡೆಯ ಬಳಿಕ ಸಲಾರ್ ಚಿತ್ರದ ಉಳಿದ ಚಿತ್ರೀಕರಣ ಆರಂಭವಾಗೋ ಸಾಧ್ಯತೆಯಿದೆ.