ಬಾಲಿವುಡ್ ನ ಚಿರಯುವಕ, ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಇತ್ತೀಚೆಗೆ ಬಿಡುಗಡೆಯಾದ ಬಹುನಿರೀಕ್ಷಿತ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’. ಜೂನ್ 3ರಂದು ಬೆಳ್ಳಿಪರದೆ ಕಂಡಂತಹ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಗಳಿಗೆ ತಣ್ಣೀರು ಎರಚಿತ್ತು. ಭಾರತೀಯ ಇತಿಹಾಸದ ಪ್ರಮುಖ ದೊರೆ ಪೃಥ್ವಿರಾಜ್ ಚೌಹಾಣ್ ಅವರ ಕಥೆ ಹಿಡಿದು ಮಾಡಿದ್ದ ಈ ಸಿನಿಮಾದ ಮೇಲೆ ಸಿನಿರಸಿಕರು ಆಸೆಯ ದೃಷ್ಟಿ ನೆಟ್ಟಿದ್ದರು. ಆದರೆ ಅಭಿಮಾನಿಗಳು ಅಂದುಕೊಂಡಂತಹ ನಿರೀಕ್ಷೆಗಳಾಗಲಿ, ಚಿತ್ರತಂಡ ಬಯಸಿದ ಫಲಿತಾಂಶವಾಗಲಿ ಸಿನಿಮಾದಿಂದ ದೊರೆಯಲಿಲ್ಲ. ಸದ್ಯ ಈ ಸಿನಿಮಾ ಒಟಿಟಿ ಪರದೆ ಸೇರಲು ಸಜ್ಜಾಗಿದೆ.
ಡಾ| ಚಂದ್ರಪ್ರಕಾಶ್ ದ್ವಿವೇದಿ ಅವರು ನಿರ್ದೇಶಿಸಿರುವ ಈ ಐತಿಹಾಸಿಕ ಸಿನಿಮಾ ಇದೇ ಜುಲೈ 1ರಿಂದ ‘ಅಮೆಜಾನ್ ಪ್ರೈಮ್ ವಿಡಿಯೋ’ದಲ್ಲಿ ಲಭ್ಯವಾಗಲಿದೆ. ಹಿಂದಿ ಭಾಷೆಯ ಜೊತೆಗೆ ತಮಿಳು ಹಾಗು ತೆಲುಗು ಭಾಷೆಗಳಲ್ಲೂ ‘ಪ್ರೈಮ್ ವಿಡಿಯೋ’ದಲ್ಲಿ ಚಿತ್ರ ಲಭ್ಯವಾಗಲಿದೆ. ಅಕ್ಷಯ್ ಕುಮಾರ್ ಅವರ ಜೊತೆಗೆ ‘ಮಿಸ್ ವರ್ಲ್ಡ್’ ಖ್ಯಾತಿಯ ಮಾನುಷಿ ಚಿಲ್ಲರ್, ಸೋನು ಸೂದ್, ಸಂಜಯ್ ದತ್ ಮುಂತಾದ ಹೆಸರಾಂತ ಕಲಾವಿದರೂ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶ್ ರಾಜ್ ಫಿಲಂಸ್(YRF) ಸಿನಿಮಾಗೆ ಬಂಡವಾಳ ಹೂಡಿದ್ದು, ಅಕ್ಷಯ್ ಕುಮಾರ್ ಅವರು ಒಂದು ಪರಿಪೂರ್ಣವಾದ ಐತಿಹಾಸಿಕ ಪಾತ್ರವನ್ನು ನೇರವೇರಿಸಿದ ಮೊದಲ ಸಿನಿಮಾ ಇದಾಗಿದೆ.
ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು ಇದೇ ಜುಲೈ 1ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ. ಸಿನಿಮಾದ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್, “ಮೂರು ದಶಕದ ನನ್ನ ಸಿನಿರಂಗದ ವೃತ್ತಿಯಲ್ಲಿ ಮೊದಲ ಬಾರಿಗೆ ಒಂದು ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಪಾತ್ರಕ್ಕೆ ಜೀವ ತುಂಬಿರುವುದು ನನಗೆ ಹೆಮ್ಮೆಯ ವಿಚಾರ. ನಮ್ಮೀ ಅದ್ಭುತ ಸಿನಿಮಾವನ್ನು ಪ್ರೈಮ್ ವಿಡಿಯೋ ಮೂಲಕ ನಿಮ್ಮ ಮುಂದಿಡಲು ನಾವು ಉತ್ಸುಕಾರಾಗಿದ್ದೇವೆ” ಎಂದಿದ್ದಾರೆ. ಜುಲೈ ಒಂದನೇ ತಾರೀಕಿನಿಂದ ‘ಪ್ರೈಮ್ ವಿಡಿಯೋ’ದಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ.