ಕನ್ನಡದ ನಟಿಮಣಿಯರು ಬೇರೆ ಭಾಷೆಯ ಚಿತ್ರರಂಗದಲ್ಲಿ ಹೋಗಿ ಮಿಂಚುವುದು ನಮಗೇನು ಹೊಸತಲ್ಲ. ಹಲವು ಕನ್ನಡದ ಹೀರೋಯಿನ್ ಗಳು ತಮಿಳು, ತೆಲುಗು ಜೊತೆಗೆ ಬಾಲಿವುಡ್ ನಲ್ಲೂ ಮೂಡಿ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಸದ್ಯ ಈ ಸಾಲಿಗೆ ಕನ್ನಡದ ಯುವನಟಿ ಶ್ರೀಲೀಲಾ ಸೇರಿಕೊಂಡಿದ್ದಾರೆ. ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು, ‘ಪೆಳ್ಳಿ ಸಂದ ಡಿ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ, ಇದೀಗ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ.
ಸದ್ಯ ಕೇಳಿಬರುತ್ತಿರುವ ಹೊಸ ಸುದ್ದಿಯೆಂದರೆ ಕನ್ನಡತಿ ಶ್ರೀಲೀಲಾ ಅವರು ತೆಲುಗಿನ ಸೂಪರ್ ಸ್ಟಾರ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಮಹೇಶ್ ಬಾಬು ಅವರ ನೇ ಸಿನಿಮಾ, ತಾತ್ಕಾಲಿಕವಾಗಿ ‘ಎಸ್ ಎಸ್ ಎಂ ಬಿ 28(SSMB28)’ ಎಂದು ಕರೆಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಇದಷ್ಟೇ ಅಲ್ಲದೇ ಇನ್ನೂ ಸುಮಾರು ಐದು ತೆಲುಗು ಚಿತ್ರಗಳ ಜೊತೆಗೆ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ.
‘ಮಾಸ್ ಮಹಾರಾಜ’ ರವಿತೇಜ ಅವರ ಜೊತೆ ‘ಧಮಾಕಾ’ ಎಂಬ ಚಿತ್ರದಲ್ಲಿಯೂ ಸಹ ಶ್ರೀಲೀಲಾ ಬಣ್ಣ ಹಚ್ಚಲಿದ್ದಾರೆ. ಇನ್ನೂ ಪ್ರಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಮ್’ ಅಡಿಯಲ್ಲಿ, ಕಿರೀಟಿ ರೆಡ್ಡಿ ಅವರ ಜೊತೆಗೆ ಕನ್ನಡ ಹಾಗು ತೆಲುಗು ದ್ವಿಭಾಷ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಾಯಕಿ. ಇನ್ನು ಇತ್ತೀಚಿಗಷ್ಟೇ ಮುಹೂರ್ತ ಮುಗಿಸಿಕೊಂಡ ನಿತಿನ್ ಅವರ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ‘ಪ್ರೊಡಕ್ಷನ್ ನಂಬರ್ 9’ ಎಂದು ಕರೆಯಲಾಗುತ್ತಿದೆ. ಅಷ್ಟೇ ಅಲ್ಲದೇ ದಿಗ್ಗಜ ಬಾಲಯ್ಯನವರ ಜೊತೆಗೆ, ಅವರ ಮಗಳ ಪಾತ್ರದಲ್ಲೂ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಶ್ರೀಲೀಲಾ ನಟಿಸುವುದು ಖಾತ್ರಿಯಾಗಿದೆ. ಹಾಗೆಯೇ ‘ಸಿತಾರ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ವೈಷ್ಣವ್ ತೇಜ್ ಅವರ ಜೊತೆಗೂ ಸಹ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ.
ಒಟ್ಟಿನಲ್ಲಿ ಕನ್ನಡದಿಂದ ಆರಂಭಿಸಿ ಸದ್ಯ ತೆಲುಗಿನಲ್ಲೂ ಸಹ ಬಹುಬೇಡಿಕೆಯ ನಟಿಯಾಗುತ್ತಿದ್ದಾರೆ ಶ್ರೀಲೀಲಾ. ಒಟ್ಟು ಸುಮಾರು ಏಳು ತೆಲುಗು ಸಿನಿಮಾಗಳಲ್ಲಿ ಇವರು ನಟಿಸುತ್ತಿರುವುದು ಖಾತ್ರಿಯಾಗಿದ್ದು, ಯಾವಾಗ ಬರಲಿದೆ ಎಂದು ಕಾದುನೋಡಬೇಕಿದೆ.