ವಿಕ್ರಾಂತ್ ರೋಣ ಸಿನಿಮಾದ ರಾ..ರಾ.. ರಕ್ಕಮ್ಮ ಹಾಡು ಉಂಟು ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಎಲ್ಲರ ಬಾಯಲ್ಲೂ ಅದೇ ಹಾಡು. ಇನ್ನು ರೀಲ್ಸ್ ಮಾಡುವವರಿಗಂತೂ ಹೇಳುವುದೇ ಬೇಡ. ರೀಲ್ಸ್ ಎಂದ ಮೇಲೆ ಅದರಲ್ಲಿ ರಾ ರಾ ರಕ್ಕಮ್ಮ ಹಾಡು ಇರಲೇಬೇಕು. ಇಲ್ಲದಿದ್ದರೆ ರೀಲ್ಸ್ ಮಾಡಿದ್ದ ಸಾರ್ಥಕವಿಲ್ಲ ಎನ್ನುವಷ್ಟರ ಮಟ್ಟಿಗೆ ಆ ಹಾಡು ಹವಾ ಸೃಷ್ಟಿ ಮಾಡಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ್ದು ಅದು ಸಕತ್ ವೈರಲ್ ಆಗಿತ್ತು.
ಇದೀಗ ಕಿರುತೆರೆಯ ಗುಳಿಕೆನ್ನೆಯ ಚೆಲುವೆಯ ಸರದಿ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿರುವ ವೈಷ್ಣವಿ ಗೌಡ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು ರೀಲ್ಸ್ ಹಾಕಿದ್ದೇ ತಡ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಬೆಳ್ಳಿ ಚುಕ್ಕಿ ಹಳ್ಳಿ ಹಕ್ಕಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ವೈಷ್ಣವಿ ಗೌಡ ದೇವಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದರೂ ಜನಪ್ರಿಯರಾಗಿದ್ದು ಅಗ್ನಿಸಾಕ್ಷಿ ಮೂಲಕ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಏಳು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸುತ್ತಿದ್ದ ವೈಷ್ಣವಿ ಎಂದ ಕೂಡಲೇ ನೆನಪಾಗುವುದು ಸನ್ನಿಧಿ ಪಾತ್ರ.
ಮುಂದೆ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ವೈಷ್ಣವಿ ಬಹುಕೃತ ವೇಷಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಮಗದೊಂದು ಸಿನಿಮಾ ಒಪ್ಪಿಕೊಂಡಿರುವ ವೈಷ್ಣವಿ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.