ಕನ್ನಡ ಚಿತ್ರರಂಗ ಒಂದು ಅಗಾಧ ಆಕಾಶದಂತೆ. ಇಲ್ಲಿ ಬರೋ ಚಿತ್ರಗಳ ವಿವಿಧತೆಯನ್ನ ಎಣಿಸಿಡಲು ಸಾಧ್ಯವಿಲ್ಲ. ಸಂಪೂರ್ಣ ಕಮರ್ಷಿಯಲ್ ಆಕ್ಷನ್ ಸಿನಿಮಾದಿಂದ ಹಿಡಿದು ಮನಸ್ಸಿಗೆ ಮುದ ನೀಡೋ ಒಂದೊಳ್ಳೆ ಕಥೆಯವರೆಗೆ ಇಲ್ಲಿ ಎಲ್ಲವೂ ಲಭ್ಯ. ಈಗ ಇದೇ ರೀತಿಯ ಹೊಸ ಕಥೆಯೊಂದು ಬರಲು ಸಜ್ಜಾಗಿದೆ, ಅದುವೇ ‘ಸ್ಕೂಲ್ ಲವ್ ಸ್ಟೋರಿ’.
ಹೆಸರಲ್ಲಿರುವಂತೆ ಇದು ಶಾಲೆಯಲ್ಲಿ ನಡೆಯೋ ಪ್ರೇಮಕತೆಯಷ್ಟೇ ಅಲ್ಲ. ಶಾಲೆಯೊಂದಿಗೆ ಮಕ್ಕಳ ಪ್ರೇಮಕತೆ. ಹಳ್ಳಿಮಕ್ಕಳ ವಿದ್ಯಾಭ್ಯಾಸ, ಅಲ್ಲಿನ ಭೇಧಭಾವಗಳು, ಬಡವ-ಶ್ರೀಮಂತ, ಬಡವಿದ್ಯಾರ್ಥಿಗಳ ಬಾಳಲ್ಲಿನ ಕಷ್ಟಗಳು ಕೊನೆಗೆ ಅವರಿಂದಾಗೊ ಸಾಧನೆಗಳು ಹೀಗೆ ಒಬ್ಬ ಸಾಮಾನ್ಯ ವಿದ್ಯಾರ್ಥಿಯ ಕಥೆಯನ್ನ ಹೊತ್ತುತರುತ್ತಿದೆ ಈ ‘ಸ್ಕೂಲ್ ಲವ್ ಸ್ಟೋರಿ’. ಚಿತ್ರದಲ್ಲಿ ಸೃಷ್ಟಿ, ಪ್ರತೀಕ್, ಸಿದ್ದಾರ್ಥ್ ಎಂಬ ಎಳೆಕಲಾವಿದರು ಬಾಳನಟರಾಗಿ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಹಿರಿಯ ನಟ ಎಂ ಎಸ್ ಉಮೇಶ್ ಅವರು ಕೂಡ ಜೊತೆಯಾಗಿದ್ದಾರೆ. ನಟರಾದ ರವಿಶಂಕರ್, ಅನುಷಾ ಶಿವಕುಮಾರ್, ಅನುಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಚಿರಂಜೀವಿ ನಾಯ್ಕ್ ಪಿ ಎಂಬ ಯುವಕಲಾವಿದರು ಈ ಕಥೆಯ ಸೃಷ್ಟಿಕರ್ಥ. ಕಥೆ- ಚಿತ್ರಕತೆ-ಸಂಭಾಷಣೆ -ಸಂಕಲನದ ಜೊತೆಗೆ ನಿರ್ದೇಶನವನ್ನು ಕೂಡ ಇವರೇ ಮಾಡಿದ್ದಾರೆ. ಅಷ್ಟೇ ಅಲ್ಲದೇ, ‘ಚಿರಂಜೀವಿ ಸಿನಿ ಕ್ರಿಯೇಷನ್ಸ್’ ಎಂಬ ಹೆಸರಿನಲ್ಲಿ ಸಿನಿಮಾದ ನಿರ್ಮಾಣ ಕೂಡ ಇವರದ್ದೇ ಜವಾಬ್ದಾರಿ. ಶಿವಕುಮಾರ್ ಇವರಿಗೆ ನಿರ್ಮಾಣದಲ್ಲಿ ಸಹಾಯವಾಗಿದ್ದಾರೆ. ಎ. ಟಿ. ರವೀಶ್ ಅವರ ಸಂಗೀತ ಚಿತ್ರಕ್ಕಿದ್ದು ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಮೆಹಬೂಬ್ ಸಾಬ್ ಹಾಗು ಇಂದು ನಾಗರಾಜ್ ಅವರು ಹಾಡುಗಳಿಗೆ ಧ್ವನಿಯಗಿದ್ದಾರೆ. ಸಕಲೇಶಪುರ, ಮಡಿಕೇರಿ ಹಾಗು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಏಪ್ರಿಲ್ ನಲ್ಲಿ ಬೆಳ್ಳಿತೆರೆ ಮೇಲೆ ಬರಲು ಕಾಯುತ್ತಿದ್ದಾರೆ.