ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಹೊಸತನ ಕೇವಲ ಚಿತ್ರದ ಮೇಕಿಂಗ್ ನಲ್ಲಿರದೆ, ಕಥೆಗಳಲ್ಲೂ ಕಾಣುತ್ತಿರುವುದು ಸಂತೋಷ. ಹಲವು ಸಮಾಜಸ್ನೇಹಿ ವಿಚಾರಗಳನ್ನು ಕೂಡ ನಮ್ಮ ಕನ್ನಡದ ಸಿನಿಮಾಗಳು ಹೊತ್ತು ತಂದಿರೋ ಉದಾಹರಣೆಗಳಿವೆ. ಅದರಲ್ಲೊಂದು ಇತ್ತೀಚೆಗೆ ಬಂದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’. ಸದ್ಯ ಈ ಸಿನಿಮಾ ಒಟಿಟಿ ಪರದೆ ಏರಿದೆ.
ಮಧು ಚಂದ್ರ ಅವರು ಬರೆದು ನಿರ್ದೇಶಿಸಿರೋ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾದಲ್ಲಿ ‘ಟಾಕಿಂಗ್ ಸ್ಟಾರ್’ ಸೃಜನ್ ಲೋಕೇಶ್ ಹಾಗು ಮೇಘನಾ ರಾಜ್ ಅವರು ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಮೇ 13ರಂದು ಹಿರಿತೆರೆಮೇಲೆ ಬಿಡುಗಡೆಯಾಗಿದ್ದ ಈ ಸಿನಿಮಾ ಈಗಿನ ಮಕ್ಕಳ ಮೇಲೆ ಮೊಬೈಲ್ ಉಂಟುಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತದೆ. ಶಾಲೆಗೆ ಹೋಗುವ ಮಕ್ಕಳು ಮೊಬೈಲ್ ಫೋನ್ ಗೆ ಅತಿಯಾಗಿ ಹೊಂದಿಕೊಂಡು, ಅದರಿಂದ ಅನುಭವಿಸುವ ತೊಂದರೆಗಳನ್ನು ಹಾಸ್ಯಭರಿತವಾಗಿ ತೆರೆಮೇಲೆ ತೋರಿಸಲಾಗಿದೆ. ಸದ್ಯ ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಾಗದೆ ಇದ್ದವರು, ಪ್ರೈಮ್ ವಿಡಿಯೋ ಮೂಲಕ ಈ ಸಿನಿಮಾವನ್ನ ಸದ್ಯ ನೋಡಬಹುದಾಗಿದೆ.