ಬಾಲಕಲಾವಿದೆಯಾಗಿ ಕಿರುತೆರೆಗೆ ಕಾಲಿಟ್ಟ ಸುಕೃತಾ ನಾಗ್ ಫೇಮಸ್ ಆಗಿದ್ದು ಅಂಜಲಿಯಾಗಿ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ತಂಗಿ ಅಂಜಲಿ ಆಗಿ ಕರುನಾಡಿನ ಮನೆ ಮನ ಗೆದ್ದ ಹುಡುಗಿ ಸುಕೃತಾ ನಾಗ್ ಈಗ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಆಗಿ ಮೋಡಿ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಜೀವ ತುಂಬಿರುವ ಸುಕೃತಾ ಅವರ ಹೊಸ ಲುಕ್ ಗೆ ಪ್ರೇಕ್ಷಕ ಪ್ರಭು ಈಗಾಗಲೇ ಫಿದಾ ಆಗಿದ್ದಾಗಿದೆ.
ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ಸುಕೃತಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಫ್ಯಾಷನ್ ಅಂದರೆ ಇಷ್ಟ ಪಡುವ ಸುಕೃತಾ ಈಗ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಸ್ಪೆಷಲ್ ಫೋಟೋಶೂಟ್ ನಲ್ಲಿ ಶಾಕುಂತಲೆಯ ರೀತಿಯಲ್ಲಿ ತಯಾರಾಗಿರುವ ಸುಕೃತಾ ಫ್ಯಾಷನ್ ಪ್ರಿಯರ ಮನ ಸೆಳೆದಿದ್ದಾರೆ. ಸದಾ ಮಾಡರ್ನ್ ಔಟ್ ಫಿಟ್ ಗಳಿಂದ ಗಮನ ಸೆಳೆಯುತ್ತಿದ್ದ ಸುಕೃತಾ ಈ ಬಾರಿ ಸೀರೆ ಉಟ್ಟು ಮಿಂಚಿದ್ದಾರೆ.
ಈ ಮೊದಲು ಸುಕೃತಾ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿರಲಿಲ್ಲ. ಹಬ್ಬ, ಸಮಾರಂಭಗಳು ಇದ್ದಾಗ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದ ಈ ಚೆಂದುಳ್ಳಿ ಚೆಲುವೆ ಈ ಬಾರಿ ವಿಭಿನ್ನ ಎಂಬಂತೆ ಶಾಕುಂತಲೆ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಶ್ವೇತ ವರ್ಣದ ಸೀರೆ ಉಟ್ಟು ಅದಕ್ಕೆ ಒಪ್ಪುವ ಮೂಗುತಿಯಲ್ಲಿ ಕಂಗೊಳಿಸುವ ಸುಕೃತಾ ಅದಕ್ಕೆ ತಕ್ಕಂತೆ ಮೇಕಪ್ ಮಾಡಿಸಿಕೊಂಡು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಫೋಟೊಶೂಟ್ ಮೂಲಕ ಸುಕೃತಾ ಸಾಕಷ್ಟು ಸದ್ದು ಮಾಡುತ್ತಿರುವುದಂತೂ ನಿಜ.