‘ವಿಕ್ರಮ್’, ಸದ್ಯ ತಮಿಳಿನಲ್ಲಿ ಬಹು ನಿರೀಕ್ಷಿತ ಚಿತ್ರ. ಭಾರತ ಚಿತ್ರರಂಗದ ದಿಗ್ಗಜ ನಟರುಗಳಲ್ಲಿ ಒಬ್ಬರಾದ ಕಮಲ್ ಹಾಸನ್ ನಟನೆಯ 232ನೇ ಚಿತ್ರವಿದು. ಇದೇ ಜೂನ್ 3ರಂದು ತೆರೆಮೇಲೆ ಬರಲು ಸಿದ್ದವಾಗಿರೋ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗದಿದ್ದರೂ, ಆಗಾಗ ಸುಳಿವುಗಳು ಸಿಗುತ್ತಲಿರುತ್ತವೆ. ಈಗಲೂ ಸಹ ಚಿತ್ರದ ತಾರಾಗಣದ ಬಗೆಗಿನ ಸುದ್ದಿಯೊಂದು ಹೊರಬಿದ್ದಿದೆ.
‘ವಿಕ್ರಮ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ತಮಿಳಿನ ಮನೋಜ್ಞ ನಟ ವಿಜಯ್ ಸೇತುಪತಿ, ಅರ್ಜುನ್ ದಾಸ್, ಮಲಯಾಳಂನ ಫಹಾದ್ ಫಾಸಿಲ್ ಮುಂತಾದವರು ನಟಿಸುತ್ತಿದ್ದಾರೆ. ಈ ಸಾಲಿಗೆ ಕನ್ನಡದ ಸುಂದರಿ ಶಾನ್ವಿ ಶ್ರೀವಾಸ್ತವ ಸೇರಿಕೊಳ್ಳುತ್ತಿದ್ದಾರೆ. ಕನ್ನಡದ ‘ಮಾಸ್ಟರ್ ಪೀಸ್’, ‘ಮಫ್ತಿ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಚಿತ್ರಗಳಿಂದ ಪ್ರಸಿದ್ದರಾಗಿರುವ ಶಾನ್ವಿ ಇದೀಗ ಕಮಲ್ ಹಾಸನ್ ಅವರ ಜೋಡಿಯಾಗಿ ನಟಿಸಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಬರುವಂತಹ ಫ್ಲಾಶ್ ಬ್ಯಾಕ್ ಕಥೆಯೊಂದರ ಮುಖ್ಯಪಾತ್ರವಾಗಿ, ಕಮಲ್ ಹಾಸನ್ ಅವರ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ ಶಾನ್ವಿ. ಈ ಫ್ಲಾಶ್ ಬ್ಯಾಕ್ ಸನ್ನಿವೇಶಗಳಿಗಾಗಿ ವಿಶೇಷ ತಂತ್ರಜ್ಞಾನಗಳನ್ನು ಬಳಸಿ, ಕಮಲ್ ಹಾಸನ್ ಅವರನ್ನು ಎಳೆಯ ವಯಸ್ಸಿನವರಂತೆ ತೋರಿಸಲಾಗಿದೆ ಎಂಬ ಸುದ್ದಿಯಿದೆ.
ತಮಿಳಿನ ‘ಕೈಥಿ’ ಹಾಗು ‘ಮಾಸ್ಟರ್’ ಚಿತ್ರಗಳ ಖ್ಯಾತಿಯ ನಿರ್ದೇಶಕರಾದ ಲೋಕೇಶ್ ಕಣಗರಾಜ್ ಅವರೇ ಈ ಸಿನಿಮಾದ ಸೃಷ್ಟಿಕರ್ತರು. ಈಗಾಗಲೇ ಅತ್ಯುತ್ತಮ ಚಿತ್ರಗಳನ್ನ ನೀಡಿರೋ ನಿರ್ದೇಶಕರು ಇವರಾಗಿರುವುದರಿಂದ, ಇವರ ಹಾಗು ಕಮಲ್ ಹಾಸನ್ ಜೋಡಿಯ ‘ವಿಕ್ರಮ್’ ಚಿತ್ರದ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ. ಅತಿ ನಿಷ್ಣಾತ ಸಂಗೀತ ನಿರ್ದೇಶಕ ಅನಿರುಧ್ ಅವರ ಕೈಚಳಕ ಚಿತ್ರದಲ್ಲಿರಲಿದೆ. ಕಮಲ್ ಹಾಸನ್ ಅವರು ತಮ್ಮದೇ ಸಂಸ್ಥೆಯಾದ ‘ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಷನಲ್’ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಜೂನ್ 3ರಿಂದ ಅಭಿಮಾನಿಗಳನ್ನು ರಂಜಿಸಲು ಬರಲಿದೆ.